ಉಡುಪಿ ಜಿಲ್ಲಾ ಎಸ್‌ಸಿ ಮೋರ್ಚಾದಿಂದ ಸಂವಿಧಾನ ದಿನಾಚರಣೆ

Update: 2021-11-26 14:43 GMT

ಉಡುಪಿ, ನ.26: ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ನೇತೃತ್ವದಲ್ಲಿ ಸಂವಿಧಾನ ದಿನವನ್ನು ನ.26ರಂದು ಬಿಜೆಪಿ ಜಿಲ್ಲಾ ಕಚೇರಿ ಯಲ್ಲಿ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜಿ ವಹಿಸಿದ್ದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯಲಾಯಿತು. ಕಾರ್ಯಕ್ರಮವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉದ್ಘಾಟಿಸಿ ಮಾತನಾಡಿದರು.

ದೇಶದ ಸಂವಿಧಾನದ ಆಶಯಗಳ ಬಗ್ಗೆ ನಿವೃತ್ತ ಉಪನ್ಯಾಸಕ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ವಿಸ್ತೃತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮುನ್ನಾ ಎರ್ಮಾಳು, ಶಿವಾನಂದ ತಲ್ಲೂರು, ತಿಲಕರಾಜ್ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲೆಯ ಜಾನಪದ ಕ್ರೀಡೆ ಕಂಬಳದ ಕೋಣಗಳನ್ನು 30 ವರ್ಷಗಳಿಂದ ಸಲಹುತ್ತಿರುವ ಗುರುವ ಮೇಸ್ತ್ರಿ ಮಾರ್ಪಳ್ಳಿ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಗಣೇಶ್ ಗಂಗೊಳ್ಳಿ ಮತ್ತು ಮಾಸ್ಟರ್ ಕಾರ್ತಿಕ್ ಇವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್ಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ 30 ಮಂದಿ ವಿದ್ಯಾರ್ಥಿ ಗಳನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಎಸ್‌ಸಿ ಮೋರ್ಚಾ ಉಸ್ತುವಾರಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಪಕ್ಷದ ಪ್ರಮುಖರಾದ ಆನಂದ ಮಟಪಾಡಿ, ಎಸ್.ಸಿ. ಮೋರ್ಚಾ ಉಡುಪಿ ನಗರ ಮಂಡಲ ಅಧ್ಯಕ್ಷ ಕಿರಣ್, ಕುಂದಾಪುರ ಮಂಡಲ ಅಧ್ಯಕ್ಷ ಮಹೇಶ್ ಕಾಳಾವರ, ಬೈಂದೂರು ಮಂಡಲ ಅಧ್ಯಕ್ಷ ಚಂದ್ರ ಪಂಚವಟಿ, ಕಾರ್ಕಳ ಮಂಡಲ ಅಧ್ಯಕ್ಷ ಅನ್ನಿ ಕಾರ್ಕಳ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸದಾನಂದ ಕೈಪುಂಜಾಲು ಸ್ವಾಗತಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಡಿ.ಬಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News