ಡಿ.5ರಿಂದ ಪರ್ಯಾಯ ಅದಮಾರು ಮಠದ ‘ವಿಶ್ವಾರ್ಪಣಂ’

Update: 2021-11-26 15:46 GMT

ಉಡುಪಿ, ನ.26: ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರ ಪ್ರಥಮ ಪರ್ಯಾಯ ಮುಂದಿನ ಜನವರಿ 18ರಂದು ಮುಕ್ತಾಯಗೊಳ್ಳಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಪರ್ಯಾಯಾವಧಿಯ ದೀಕ್ಷಾ ಸಮಾಪನ ಕಾರ್ಯಕ್ರಮ ‘ವಿಶ್ವಾರ್ಪಣಮ್’ ಇದೇ ಡಿ.5ರಿಂದ 26ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಅದಮಾರು ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ತಿಳಿಸಿದ್ದಾರೆ.

ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಾರ್ಪಣಮ್ ಕಾರ್ಯಕ್ರಮವನ್ನು ಡಿ.5ರಂ ಸಂಜೆ 4 ಗಂಟೆಗೆ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದು, ಪರ್ಯಾಯ ಶ್ರೀಈಶಪ್ರಿಯ ತೀರ್ಥರು ಹಾಗೂ ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥರು ಉಪಸ್ಥಿತರಿರುವರು.

ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಮಣಿಮೇಖಲೈ, ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ., ಕಿರುತೆರೆ ನಟ ಹಾಗೂ ರಂಗ ನಿರ್ದೇಶಕ ಎಸ್.ಎನ್.ಸೇತುರಾಮ್ ಭಾಗವಹಿಸಲಿದ್ದಾರೆ. ಒಟ್ಟು 18 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಗೋವಿಂದರಾಜ್ ತಿಳಿಸಿದರು.

ನಂತರ ಡಿ.26ರವರೆಗೆ ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ನಾಡಿನ 30ಕ್ಕೂ ಅಧಿಕ ವಿವಿಧ ಮಠಾಧೀಶರುಗಳು ಪಾಲ್ಗೊಳ್ಳಲಿದ್ದಾರೆ. 26ರವರೆಗೆ ವಿವಿಧ ಕ್ಷೇತ್ರಗಳ 100ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಲಾಗುತ್ತದೆ. ನಾಡಿನ ಖ್ಯಾತನಾಮ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿ ದ್ದಾರೆ ಎಂದರು.

ವಿಶ್ವಾರ್ಪಣಮ್‌ನ ಸಮಾರೋಪ ಸಮಾರಂಭ ಡಿ.26ರಂದು ನಡೆಯಲಿದ್ದು, ಉಡುಪಿಯ ಅಷ್ಟಮಠಾಧೀಶರುಗಳೊಂದಿಗೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಹಾಗೂ ಭಗವಂತ ಖೂಬ ಪಾಲ್ಗೊಳ್ಳಲಿದ್ದಾರೆ. ಡಿ.11ರಿಂದ 19ರವರೆಗೆ ರಾಷ್ಟ್ರೀಯ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದ್ದು, ಇದನ್ನು ಕಟಪಾಡಿ ಆನೆಗುಂದಿ ಮಠದ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಚಿವ ಶಿವರಾಮ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಿ.12ರಿಂದ 14ರವರೆಗೆ ರಾಜ್ಯಮಟ್ಟದ ದೇಶೀ ಗೋಪಾಲಕ, ಕೃಷಿಕ ಹಾಗೂ ಗೋ-ಉತ್ಪನ್ನ ತಯಾರಕರ ಸಮ್ಮೇಳನ ನಡೆಯ ಲಿದ್ದು, ಇದನ್ನು ಬೆಳಗ್ಗೆ 8:30ಕ್ಕೆ ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಉದ್ಘಾಟಿಸಲಿದ್ದಾರೆ. ಸಮಾರೋಪ ಡಿ.14ರಂದು ಸಂಜೆ 4ಕ್ಕೆ ನಡೆಯಲಿದ್ದು, ಕೊಲ್ಪಾಪುರ ಕನ್ಹೇರಿ ಮಠದ ಶ್ರೀಅದೃಷ್ಟ ಕಾಡಸಿದ್ದೇಶ್ವರ ಸ್ವಾಮೀಜಿ, ಕದ್ರಿ ಮಠದ ಶ್ರೀನಿರ್ಮಲಾನಾಥ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಠದ ವಿದ್ವಾಂಸ ಕೃಷ್ಣರಾಜ ಕುತ್ಪಾಡಿ, ಸಂತೋಷ್ ಕುಮಾರ್, ಪ್ರದೀಪ್ ಕುಮಾರ್, ಶ್ರೀಶ ಕಡೆಕಾರ್, ರೋಹಿತ್ ತಂತ್ರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News