ಭಾರತದಲ್ಲಿ ಸಾಕಷ್ಟು ವೈದ್ಯರ ಕೊರತೆ: ಡಾ.ರಾಕೇಶ್ ಶರ್ಮ

Update: 2021-11-26 15:50 GMT

ಉಡುಪಿ, ನ.26: ವಿಶ್ವ ಆರೋಗ್ಯ ಸಂಸ್ಥೆಯ ಅನುಪಾತದ ಪ್ರಕಾರ 5000 ಮಂದಿಗೆ ಒಬ್ಬರು ವೈದ್ಯರು ಇರಬೇಕು. ಆದರೆ ಭಾರತದಲ್ಲಿ ಸಾಕಷ್ಟು ವೈದ್ಯರ ಕೊರತೆ ಇದೆ. ಆದುದರಿಂದ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಇದೇ ಕ್ಷೇತ್ರದಲ್ಲಿ ಮುಂದುವರೆದು ಜನರಿಗೆ ಸೇವೆ ನೀಡಬೇಕು ಎಂದು ಬೋರ್ಡ್ ಆಫ್ ಎಥಿಕ್ಸ್ ಆಂಡ್ ರಿಜಿಸ್ಟ್ರೇಶನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷ ಪ್ರೊ.ಡಾ.ರಾಕೇಶ್ ಶರ್ಮ ಹೇಳಿದ್ದಾರೆ.

ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ವಿಶಿಖಾನುಪ್ರವೇಶ’ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಆಯುರ್ವೇದ ಪದವೀಧರರು ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳು ಮುಂದೆ ಆಯುರ್ವೇದ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿಲ್ಲ. ಆದುದರಿಂದ ಆಯುರ್ವೇದ ವೈದ್ಯರ ಸಂಖ್ಯೆ ಕಡಿಮೆ ಆಗುತ್ತಿದೆ. ಇದು ಚಿಂತಿಸಬೇಕಾದ ವಿಚಾರವಾಗಿದೆ. ಆದುದರಿಂದ ವಿದ್ಯಾರ್ಥಿಗಳು ಆಯುರ್ವೇದ ಕ್ಷೇತ್ರದಲ್ಲೇ ಮುಂದುವರೆಯ ಬೇಕು. ಪದವಿ ಪಡೆದ ವೈದ್ಯರು ನೈತಿಕವಾಗಿ ವೈದ್ಯಕೀಯ ವೃತ್ತಿಯನ್ನು ಪಾಲಿಸ ಬೇಕು. ಸಮಾಜದ ಸ್ವಾಸ್ಥ್ಯ ರಕ್ಷಣೆಯಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವಿವಿ ಕುಲಪತಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಆಯುರ್ವೇದ ಪದ್ಧತಿಯನ್ನು ವಿಶ್ವ ದೆಲ್ಲೆಡೆ ಪಸರಿಸುವಲ್ಲಿ ವೈದ್ಯರ ಕೊಡುಗೆಯ ಬಹಳ ಮಹತ್ವದ್ದಾಗಿದೆ. ಶಾಸ್ತ್ರವನ್ನು ಅರಿತು ಪದವಿ ಪಡೆದ ನಂತರ ಸಮಾಜಮುಖಿಯಾಗಿ ಆಯುರ್ವೇದವನ್ನೇ ಅನುಸರಿಸ ಬೇಕು. ಸಂಶೋಧನೆಯಲ್ಲಿ ತೊಡಗಿಸಿಕೊಂಡು ನವೀನ ತಂತ್ರಜ್ಞಾನ ವನ್ನು ಕೂಡ ಅಳವಡಿಸಿಕೊಂಡು ಯಶಸ್ಸು ಕಾಣಬೇಕು ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ವತಿಯಿಂದ ಸ್ನಾತಕ ವಿದ್ಯಾರ್ಥಿನಿ ಡಾ.ಪ್ರತಿಮಾ ಪೌಡೆಲ್ ಹಾಗೂ ಡಾ.ಮೇಘಾ ಅವರಿಗೆ ಉತ್ತಮ ಫಲಿತಾಂಶಕ್ಕಾಗಿ ಚಿನ್ನದ ಪದಕವನ್ನು ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಪದವಿ ಪಡೆದ 187 ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರ ಕುಮಾರ ಕೆ., ಸಹ ಕ್ಷೇಮಪಾಲನಾಧಿಕಾರಿ ಡಾ.ಚೈತ್ರ ಎಸ್.ಹೆಬ್ಬಾರ್ ಹಾಗೂ ಸ್ನಾತಕೋತ್ತರ ವಿಭಾಗದ ಸಹಾಯಕ ಡೀನ್ ಡಾ.ಸುಚೇತ ಕುಮಾರಿ ವಿದ್ಯಾರ್ಥಿ ಗಳನ್ನು ಪದವಿ ಪತ್ರವನ್ನು ಪಡೆಯಲು ಆಹ್ವಾನಿಸಿದರು.

ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ.ನಿರಂಜನ್ ರಾವ್ ಸ್ವಾಗತಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಅರುಣ್ ಕುಮಾರ್ ಮತ್ತು ಡಾ.ನಿವೇದಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News