ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಮರಳು ತುಂಬಿದ್ದ ಟಿಪ್ಪರ್‌ನೊಂದಿಗೆ ಚಾಲಕ ಪರಾರಿ

Update: 2021-11-26 16:44 GMT

ಉಡುಪಿ, ನ.26: ಟಿಪ್ಪರ್ ಚಾಲಕನೋರ್ವ ಪೊಲೀಸ್ ಸಿಬ್ಬಂದಿಯನ್ನು ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ನೊಂದಿಗೆ ಪರಾರಿಯಾಗಿರುವ ಘಟನೆ ನ.25ರಂದು ಬೆಳಗ್ಗೆ ಕೊರಂಗ್ರಪಾಡಿ -ಅಲೆವೂರು ರಸ್ತೆಯ ಮಾನಸ ಬಸ್ ನಿಲ್ದಾಣದ ಬಳಿ ನಡೆದಿದೆ.

ಅಕ್ರಮ ಮರಳು ಸಾಗಾಟದ ಕುರಿತ ಖಚಿತ ಮಾಹಿತಿ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಟಿಪ್ಪರ್ ಲಾರಿಯನ್ನು ಪರಿಶೀಲನೆ ಮಾಡಿದಾಗ ಅದರ ಮುಂಭಾಗದ ನಂಬರ್ ಪ್ಲೇಟ್ ಮತ್ತು ಹಿಂಭಾಗದ ನಂಬರ್ ಪ್ಲೇಟ್ ಬೇರೆ ಬೇರೆ ಆಗಿದ್ದು, ಟಿಪ್ಪರ್‌ನಲ್ಲಿ ಮರಳು ತುಂಬಿರುವುದು ಕಂಡು ಬಂತು.

ಸ್ಥಳದಲ್ಲಿದ್ದ ಸಾರ್ವಜನಿಕರು ಟಿಪ್ಪರ್ ಚಾಲಕ ಬಾಗಲಕೋಟೆಯ ಯಲ್ಲಪ್ಪ ಜಾಲಾಪುರ ಎಂಬಾತನಲ್ಲಿ ತಕರಾರು ತೆಗೆಯುತ್ತಿದ್ದರು. ಆಗ ಪೊಲೀಸರು ಆತನಲ್ಲಿ ಟಿಪ್ಪರನ್ನು ಉಡುಪಿ ನಗರ ಪೊಲೀಸ್ ಠಾಣೆಗೆ ತರುವಂತೆ ತಿಳಿಸಿದರು. ಆದರೆ ಆತ ಪೊಲೀಸ್ ಸಿಬ್ಬಂದಿಯವರ ಅಂಗಿಯನ್ನು ಹಿಡಿದು ಎಳೆದು ಹಿಂದೆ ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಟಿಪ್ಪರ್ ಹತ್ತಿ ಚಲಾಯಿಸಿಕೊಂಡು ಪರಾರಿ ಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News