ಡಾ.ಎಂ.ಎನ್.ರಾಜೇಂದ್ರ ಕುಮಾರ್ ಗೆ 'ಮಾಧ್ಯಮ ಕನ್ನಡ ರಾಜ್ಯೋತ್ಸವ‌ ಪ್ರಶಸ್ತಿ'

Update: 2021-11-26 17:12 GMT

ಮಂಗಳೂರು: ಕರ್ನಾಟಕ ಮಾಧ್ಯಮ ಸಹಕಾರ ಹಾಗೂ ದಿ. ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಬೆಂಗಳೂರು ಇದರ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಕನ್ನಡ  ರಾಜ್ಯೋತ್ಸವ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ  ಡಾ.ಎಂ.ಎನ್. ರಾಜೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.

ದಿ. ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆ ದಶಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ಕನ್ನಡ ಮಾಧ್ಯಮ ರಾಜ್ಯೋತ್ಸವ ಪ್ರಶಸ್ತಿ  ನೀಡುತ್ತಿದ್ದು ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಅಭಿನಂದನಾ ಪತ್ರವನ್ನು ಶುಕ್ರವಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರಾವಣ ಲಕ್ಷ್ಮಣ್ ಹಸ್ತಾಂತರಿಸಿದರು.

ಸಹಕಾರಿ ರಂಗದಲ್ಲಿ ಹೊಸ ಅವಿಷ್ಕಾರದೊಂದಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಾ , ರಾಜ್ಯ-ರಾಷ್ಟ್ರ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್ ) ಗೆ ಘನತೆ ತಂದುಕೊಟ್ಟ ಡಾ. ಎಂ ಎನ್.ರಾಜೇಂದ್ರ ಕುಮಾರ್ ಅವರಿಗೆ ಈಚೆಗೆ  ಶ್ರೀಲಂಕಾದ ಕೊಲಂಬೊದಲ್ಲಿ ' ಇಂಟರ್ ನ್ಯಾಶನಲ್ ಐಕಾನ್ ಅವಾರ್ಡ್ ' ಲಭಿಸಿತ್ತು. ಕಳೆದ 27 ವರ್ಷಗಳಿಂದ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಇವರು ಕಾರಣರಾಗಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಸಹಕಾರಿ ರಂಗಕ್ಕೆ ಹೊಸ ಆಯಾಮ ವನ್ನು ತಂದುಕೊಟ್ಟ ಇವರು  ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್ ಸಿಡಿಸಿ ಸಿ ಬ್ಯಾಂಕ್ ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಮೊಬೈಲ್ ಬ್ಯಾಂಕ್ ನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರದ್ದು.


ಪ್ರಶಸ್ತಿ ಪ್ರದಾನ ಸಮಾರಂಭವು ನ. 26ರಂದು ಬೆಂಗಳೂರು ನಗರ ಕೆ.ಆರ್.ರಸ್ತೆ ಕೋಟೆಯಲ್ಲಿರುವ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣದ ಬಿ.ಎಂ.ಸಿ.ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News