ವಿದ್ಯಾರ್ಥಿಗಳ ಬಂಧನದ ವದಂತಿ: ಹಿಂಜಾವೇಯಿಂದ ಮಹಿಳಾ ಠಾಣೆಗೆ ಮುತ್ತಿಗೆ

Update: 2021-11-26 18:11 GMT

ಪುತ್ತೂರು, ನ.26: ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್‌ ಗಾಗಿ ಪುತ್ತೂರು ಮಹಿಳಾ ಠಾಣೆಗೆ ಕರೆತಂದ ವಿಚಾರ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂಬ ವದಂತಿ ಹರಡಿದ್ದರಿಂದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಮಹಿಳಾ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕೊಂಬೆಟ್ಟು ಕಾಲೇಜ್‌ ನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸಂಘರ್ಷಕ್ಕೆ ಒಳಗಾದ ಅದೇ ಕಾಲೇಜಿನ ಆರು ವಿದ್ಯಾರ್ಥಿಗಳನ್ನು ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಕೌನ್ಸೆಲಿಂಗ್‌ಗಾಗಿ ಕರೆಸಿಕೊಂಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಒಂದು ಸಮುದಾಯದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂಬ ವದಂತಿ ಹರಿದಾಡಿತ್ತು. ಇದೇ ಕಾರಣಕ್ಕೆ ಹಿಂದೂ ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದರು. ಪೊಲೀಸರ ಬಳಿಯಲ್ಲಿರುವ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ಡಿವೈಎಸ್ಪಿ ಡಾ.ಗಾನ ಪಿ. ಕುಮಾರ್ ವಿದ್ಯಾರ್ಥಿಗಳು ಅಪ್ರಾಪ್ತ ವಯಸ್ಕರಾಗಿದ್ದು, ಅವರ ಮನ ಪರಿವರ್ತನೆಗಾಗಿ ಕೌನ್ಸೆಲಿಂಗ್ ನಡೆಸಲು ಕರೆತರಲಾಗಿದೆ ಎಂದು ಮನವರಿಕೆ ಮಾಡಲು ಯತ್ನಿಸಿದರು. ಈ ಸಂದರ್ಭದಲ್ಲಿ ಹಿಂಜಾವೇ ಮುಖಂಡ ಅಜಿತ್ ರೈ ಹೊಸಮನೆ ಮತ್ತು ಡಿವೈಎಸ್ಪಿ ನಡುೆ ಮಾತಿನ ಚಕಮಕಿಯೂ ನಡೆಯಿತು.

ಬಳಿಕ ಹಿಂಜಾವೇ ಮುಖಂಡರಾದ ಅಜಿತ್ ರೈ ಹೊಸಮನೆ, ಜಗದೀಶ್ ನೆತ್ರಕೆರೆ, ರತ್ನಾಕರ ಶೆಟ್ಟಿ, ಕೆ.ಪಿ.ಶೆಟ್ಟಿ, ದಿನೇಶ್ ಪಂಜಿಗ, ಕಾಲೇಜಿನ ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್, ನಗರ ಠಾಣೆಯ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕೆ, ಮಹಿಳಾ ಠಾಣೆಯ ಎಸ್ಸೈ ಸೇಸಮ್ಮ ಠಾಣೆಯ ಒಳಗೆ ಮಾತುಕತೆ ನಡೆಸಿದರು.

ಬಳಿಕ ಹೊರಬಂದ ಸಂಘಟನೆಯ ಮುಖಂಡರು ಮಕ್ಕಳ ಭವಿಷ್ಯಕ್ಕೆ ಹಾನಿಯಾಗುವುದಿಲ್ಲ. ಹಾಗೂ ಕಾಲೇಜಿನಲ್ಲಿ ಬಾಹ್ಯ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಡಿವೈಎಸ್ಪಿ ಭರವಸೆ ನೀಡಿದ್ದಾರೆ. ಆದುದರಿಂದ ಧರಣಿಯನ್ನು ಹಿಂಪಡೆಯುತ್ತಿರುವು ದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News