ಕಸಬ್‌ನಿಂದ ವಶಪಡಿಸಿಕೊಂಡಿದ್ದ ಫೋನ್ ತನಿಖೆ ವೇಳೆ ನೀಡದ ಪರಮ್‌ ಬೀರ್ ಸಿಂಗ್ !

Update: 2021-11-27 01:53 GMT

ಮುಂಬೈ: ಮಾಜಿ ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಅವರು ಕುಖ್ಯಾತ ಉಗ್ರ ಅಜ್ಮಲ್ ಕಸಬ್‌ನಿಂದ  ವಶಪಡಿಸಿಕೊಂಡಿದ್ದ ಮೊಬೈಲ್ ಫೋನನ್ನು ತನಿಖೆ ಅಥವಾ ವಿಚಾರಣೆ ವೇಳೆ ಪ್ರಸ್ತುತಪಡಿಸಿಲ್ಲ. ಈ ಬಗ್ಗೆ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆಯವರಿಗೆ ದೂರು ಸಲ್ಲಿಸಲಾಗಿದೆ ಎಂದು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಶಂಶೀರ್ ಖಾನ್ ಪಠಾಣ್ ಬಹಿರಂಗಪಡಿಸಿದ್ದಾರೆ.

ಲಷ್ಕರ್-ಇ-ತೋಯ್ಬದ ಉಗ್ರ ಕಸಬ್ ಸಾಗರ ಮಾರ್ಗವಾಗಿ ಪಾಕಿಸ್ತಾನದಿಂದ ಮುಂಬೈಗೆ ಆಗಮಿಸಿದ್ದು, 2011ರ ನವೆಂಬರ್ 26ರಂದು ನಗರದ ವಿವಿಧೆಡೆ ಬಾಂಬ್ ದಾಳಿ ಮತ್ತು ಶೂಟಿಂಗ್ ನಡೆಸಿದ್ದ. ಅತನನ್ನು ಬಂಧಿಸಿ ಪುಣೆಯ ಯರವಾಡ ಜೈಲಿನಲ್ಲಿ 2012ರಲ್ಲಿ ಗಲ್ಲಿಗೇರಿಸಲಾಗಿತ್ತು.

"26/11ರ ಉಗ್ರರ ದಾಳಿಯ ವೇಳೆ ಪರಮ್‌ ಬೀರ್ ಸಿಂಗ್ ಅಂದಿನ ಡಿಐಜಿಯಾಗಿದ್ದರು ಹಾಗೂ ಅಜ್ಮಲ್ ಕಸಬ್‌ನ ಫೋನನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಆದರೆ ಈ ಫೋನ್ ವಿಚಾರಣೆ ಅಥವಾ ತನಿಖೆ ವೇಳೆ ಎಂದೂ ಕಾಣಿಸಿಕೊಂಡಿಲ್ಲ" ಎಂದು ಮುಂಬೈ ಪೊಲೀಸ್ ಮುಖ್ಯಸ್ಥರಿಗೆ ಪತ್ರದಲ್ಲಿ ಪಠಾಣ್ ಹೇಳಿದ್ದಾರೆ.

ಈ ವರ್ಷದ ಜುಲೈನಲ್ಲಿ ಈ ಬಗ್ಗೆ ಪತ್ರ ಬರೆದಿದ್ದೆ. ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ಪರಮ್‌ಬೀರ್ ಸಿಂಗ್ ಅವರನ್ನು ಎನ್‌ಐಎ ಬಂಧಿಸಬೇಕಿತ್ತು. ಇವರು ಹೀಗೆ ವಶಪಡಿಸಿಕೊಂಡ ಪುರಾವೆಯನ್ನು ಐಸಿಸ್‌ಗೆ ಮಾರಾಟ ಮಾಡಿರುವ ಸಾಧ್ಯತೆ ಇದೆ ಅಥವಾ ವಸೂಲಿಗಾಗಿ ಈ ಮಾಹಿತಿಯನ್ನು ಬಳಸಿಕೊಂಡಿರುವ ಸಾಧ್ಯತೆ ಇದೆ" ಎಂದು ವಿವರಿಸಿದ್ದಾರೆ.

ಏತನ್ಮಧ್ಯೆ ಸಾರ್ವಜನಿಕ ಅಭಿಯೋಜಕ ಉಜ್ವಲ್ ನಿಕಂ "ಈ ವಿವರಗಳ ಬಗ್ಗೆ ಖಚಿತವಾದ ಮಾಹಿತಿ ನನಗಿಲ್ಲ. ಆದರೆ ವಿಚಾರಣೆ ವೇಳೆ ಕಸಬ್ ಫೋನ್ ಇರಲಿಲ್ಲ ಎನ್ನುವುದು ಗೊತ್ತು. ಆದ್ದರಿಂದ ಫೋನ್ ಹಾಜರುಪಡಿಸದ ಬಗ್ಗೆ ತನಿಖಾಧಿಕಾರಿ ಅಥವಾ ಸಂಬಂಧಪಟ್ಟ ವ್ಯಕ್ತಿಗಳೇ ಹೊಣೆಯಾಗುತ್ತಾರೆ. 10 ಮಂದಿ ದಾಳಿಕೋರರನ್ನು ಐದು ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಂದು ಫೋನ್ ನೀಡಲಾಗಿತ್ತು ಎಂಬ ಮಾಹಿತಿ ಇದೆ. ಆದರೆ ಕಸಬ್ ಫೋನನ್ನು ವಿಚಾರಣೆ ವೇಳೆ ಬಳಸಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News