ಸಂಸತ್‌ಗೆ ಟ್ರಾಕ್ಟರ್ ರ್ಯಾಲಿಯನ್ನು ಮುಂದೂಡಿದ ರೈತರು

Update: 2021-11-27 17:03 GMT

ಹೊಸದಿಲ್ಲಿ,ನ.27: ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಂದ ನ.29ರ ಉದ್ದೇಶಿತ ಸಂಸತ್‌ಗೆ ಟ್ರಾಕ್ಟರ್ ರ್ಯಾಲಿಯನ್ನು ಮುಂದೂಡಲಾಗಿದೆ ಎಂದು ರೈತ ನಾಯಕ ದರ್ಶನ ಪಾಲ್ ಅವರು ಶನಿವಾರ ತಿಳಿಸಿದರು. ಸಿಂಘು ಗಡಿಯ ಬಳಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.

ಟ್ರಾಕ್ಟರ್ ರ್ಯಾಲಿಗೆ ಹೊಸ ದಿನಾಂಕವನ್ನು ರೈತರು ಪ್ರಕಟಿಸಿಲ್ಲ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪ್ರಧಾನಿಗಳು ಈಗಾಗಲೇ ಪ್ರಕಟಸಿರುವುದರಿಂದ ಸದ್ಯಕ್ಕೆ ಟ್ರ್ಯಾಕ್ಟರ್ ರ್ಯಾಲಿಯನ್ನು ಮುಂದೂಡಬೇಕು ಎಂದು ಹಲವಾರು ರೈತ ಸಂಘಗಳು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದವು ಎಂದು ಬಲ್ಲ ಮೂಲಗಳು ತಿಳಿಸಿವೆ.

ಚಳಿಗಾಲದ ಅಧಿವೇಶನ ಆರಂಭಗೊಳ್ಳುವ ನ.29ರಂದು ಸಂಸತ್‌ಗೆ ಶಾಂತಿಯುತ ಟ್ರಾಕ್ಟರ್ ರ್ಯಾಲಿಯನ್ನು ನಡೆಸಲು ರೈತರು ಯೋಜಿಸಿದ್ದರು. ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಲು ಸರಕಾರವು ಒಪ್ಪಿದೆಯಾದರೂ ಅವು ವಿಧ್ಯುಕ್ತವಾಗಿ ರದ್ದಾಗುವವರೆಗೆ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಿಲ್ಲ ಎಂದು ರೈತರು ಹೇಳಿದ್ದಾರೆ. ಕಾನೂನುಬದ್ಧ ಎಂಎಸ್‌ಪಿ ಮತ್ತು ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳ ಹಿಂತೆಗೆತ ಸೇರಿದಂತೆ ಇತರ ಬೇಡಿಕೆಗಳನ್ನೂ ರೈತ ಸಂಘಟನೆಗಳು ಸರಕಾರದ ಮುಂದಿರಿಸಿವೆ.

ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಭವಿಷ್ಯದ ಕ್ರಮಗಳ ಬಗ್ಗೆ ಚರ್ಚಿಸಲು ಶನಿವಾರ ಸಭೆಯನ್ನು ನಡೆಸಿದ್ದು,ಎಂಎಸ್‌ಪಿ ಹಾಗೂ ದಿಲ್ಲಿ ಗಡಿಗಳಲ್ಲಿ ಪ್ರತಿಭಟನೆ ಸಂದರ್ಭ ಮತ್ತು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಸಾವುಗಳ ಕುರಿತು ಸರಕಾರವು ತಮ್ಮೊಂದಿಗೆ ಮಾತುಕತೆಗಳನ್ನು ನಡೆಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸಲು ರೈತರ ಗುಂಪುಗಳು ನಿರ್ಧರಿಸಿವೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಜವೀರ್ ಸಿಂಗ್ ಜಾದೌನ್ ಅವರು ಸುದ್ದಿಗಾರರಿಗೆ ತಿಳಿಸಿದರು.

ರೈತ ಸಂಘಟನೆಗಳು ಡಿ.4ರಂದು ಮತ್ತೆ ಸಭೆ ಸೇರಲಿವೆ.

ಈ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು,ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಕಟಣೆಯನ್ನು ಗೌರವಿಸಿ ತಮ್ಮ ಮನೆಗಳಿಗೆ ಮರಳುವಂತೆ ಪ್ರತಿಭಟನಾನಿರತ ರೈತರನ್ನು ಆಗ್ರಹಿಸಿದ್ದಾರೆ. ಪ್ರಕಟಣೆಯ ಬಳಿಕ ಪ್ರತಿಭಟನೆಯನ್ನು ನಡೆಸುವುದು ಸಮರ್ಥನೀಯವಲ್ಲ ಎಂದೂ ಅವರು ಹೇಳಿದರು.

ಅಧಿವೇಶನದ ಮೊದಲ ದಿನವಾದ ಸೋಮವಾರವೇ ಕೃಷಿ ಕಾಯ್ದೆಗಳನು ್ನಹಿಂದೆಗೆದುಕೊಳ್ಳಲು ಮಸೂದೆಯನ್ನು ಸರಕಾರವು ಮಂಡಿಸಲಿದೆ ಎಂದು ತೋಮರ್ ದೃಢಪಡಿಸಿದರು.

ಸಮಿತಿ ರಚನೆ ಪ್ರಕಟಣೆಯೊಂದಿಗೆ ಎಂಎಸ್‌ಪಿ ಕುರಿತು ರೈತರ ಬೇಡಿಕೆ ಈಡೇರಿದಂತಾಗಿದೆ ಎಂದ ಅವರು,ಕೃಷಿ ತ್ಯಾಜ್ಯಗಳನ್ನು ಸುಡುವುದನ್ನು ಅಪರಾಧ ಎಂದು ಪರಿಗಣಿಸಬಾರದು ಎಂಬ ರೈತರ ಬೇಡಿಕೆಯನ್ನು ಸರಕಾರವು ಒಪ್ಪಿಕೊಂಡಿದೆ ಎಂದು ತಿಳಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದೆಗೆದುಕೊಳ್ಳಬೇಕು ಎಂಬ ಬೇಡಿಕೆಯ ಕುರಿತಂತೆ ತೋಮರ್,ಪ್ರಕರಣಗಳ ಗಂಭೀರತೆಯನ್ನು ಅವಲಂಬಿಸಿ ರಾಜ್ಯ ಸರಕಾರಗಳು ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿವೆ. ಪರಿಹಾರ ನೀಡಿಕೆ ವಿಷಯವೂ ರಾಜ್ಯ ಸರಕಾರಗಳ ವ್ಯಾಪ್ತಿಯಡಿ ಬರುತ್ತದೆ ಎಂದರು.

ಕೃಷಿ ಕಾಯ್ದೆಗಳ ಲಾಭಗಳ ಕುರಿತು ಕೆಲವು ರೈತ ಸಂಘಟನೆಗಳಿಗೆ ಮನವರಿಕೆ ಮಾಡಲು ಸಾಧ್ಯವಾಗದಿದ್ದಕ್ಕೆ ಸರಕಾರಕ್ಕೆ ವಿಷಾದವಿದೆ ಎಂದೂ ತೋಮರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News