ಒಮಿಕ್ರಾನ್ ಪ್ರಬೇಧ ತೀವ್ರ ಆತಂಕಕಾರಿ: ಎಚ್ಚರವಹಿಸಲು ದಕ್ಷಿಣ ಏಶ್ಯಾ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಕರೆ

Update: 2021-11-28 05:49 GMT

ವಿಶ್ವಸಂಸ್ಥೆ: ಕೊರೋನ ಸೋಂಕಿನ ಮತ್ತೊಂದು ಅಪಾಯಕಾರಿ ಪ್ರಬೇಧ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೋನ ಸೋಂಕು ನಿಯಂತ್ರಣದ ಕ್ರಮಗಳನ್ನು ಬಿಗಿಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ದಕ್ಷಿಣ ಏಶ್ಯಾ ದೇಶಗಳನ್ನು ಆಗ್ರಹಿಸಿದೆ.

ಜಾತ್ರೆ, ಹಬ್ಬ, ಸಂಭ್ರಮಾಚರಣೆಗಳನ್ನು ಕೊರೋನ ಸೋಂಕಿನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸುವಂತೆ ಹಾಗೂ ಹೆಚ್ಚಿನ ಜನಗಂಗುಳಿ ಸೇರದಂತೆ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ‘ಕೊರೋನ ಸೋಂಕಿನ ಪ್ರಕರಣಗಳು ನಮ್ಮ ವಲಯದ ಬಹುತೇಕ ದೇಶಗಳಲ್ಲಿ ಇಳಿಮುಖವಾಗಿದ್ದರೂ, ವಿಶ್ವದ ಬೇರೊಂದು ಕಡೆ ಕೊರೋನ ಸೋಂಕು ಉಲ್ಬಣಗೊಂಡಿರುವ ಅಥವಾ ಹೊಸ ಆತಂಕಕಾರಿ ಪ್ರಬೇಧ ದೃಢಪಟ್ಟಿರುವುದು ಅಪಾಯ ಇನ್ನೂ ಇದೆ ಎಂಬ ಸೂಚನೆಯಾಗಿದೆ.

ಸೋಂಕು ಹರಡದಂತೆ ಮತ್ತು ಸೋಂಕಿನಿಂದ ನಮ್ಮನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಸೋಣ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಸೋಂಕು ಹರಡದಂತೆ ನಿಗಾ ಹಾಗೂ ಸೋಂಕಿನ ಪ್ರಕರಣಗಳ ಪತ್ತೆ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯಾ ವಲಯದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಮ್ ಖೇತ್ರಪಾಲ್ ಸಿಂಗ್ ಎಚ್ಚರಿಸಿದ್ದಾರೆ.

ಹೊಸ ಪ್ರಬೇಧದ ಪ್ರಸರಣ ಸಾಮರ್ಥ್ಯದ ಕುರಿತ ಪರಿಷ್ಕೃತ ಮಾಹಿತಿ ಗಮನಿಸುತ್ತಾ, ಅಂತರಾಷ್ಟ್ರೀಯ ಪ್ರಯಾಣದಿಂದ ಅಪಾಯ ಹೆಚ್ಚುತ್ತದೆಯೇ ಎಂಬುದನ್ನು ಪರಿಶೀಲಿಸಿ ಅದಕ್ಕೆ ತಕ್ಕ ಕ್ರಮ ಕೈಗೊಳ್ಳಬೇಕು. ಸೋಂಕು ಪ್ರಸರಿಸದಂತೆ ಸಮಗ್ರ ಮತ್ತು ಕ್ರಮಬದ್ಧ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಮುಂದುವರಿಸುವ ಅಗತ್ಯವಿದೆ.

ಅತ್ಯಂತ ಪರಿಣಾಮಕಾರಿಯಾದ ನಿರ್ಬಂಧ ಕ್ರಮಗಳ ಅಗತ್ಯವಿದೆ. ಕೊರೋನ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಪ್ರಸರಣಗೊಂಡರೆ ವೈರಸ್ ಹೊಸ ಪ್ರಬೇಧದ ರೂಪು ತಳೆಯಲು ಹಾಗೂ ಸೋಂಕು ದೀರ್ಘಾವಧಿಯವರೆಗೆ ಉಳಿದುಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಮೂಗು ಮತ್ತು ಬಾಯಿ ಮುಚ್ಚುವ ರೀತಿಯಲ್ಲಿ ಮುಖದ ಮೇಲೆ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಜನಸಂದಣಿಯನ್ನು ತಪ್ಪಿಸುವುದು, ಕೈಗಳನ್ನು ಸ್ವಚ್ಛವಾಗಿರಿಸುವುದು, ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಅಡ್ಡಹಿಡಿಯುವುದು, ಲಸಿಕೆ ಪಡೆಯುವುದು- ಈ ಮುನ್ನೆಚ್ಚರಿಕೆ ಕ್ರಮ ಮುಂದುವರಿಯಬೇಕು.

ಇದುವರೆಗೆ, ಈ ವಲಯದ ಜನಸಂಖ್ಯೆಯಲ್ಲಿ 31% ಜನತೆ ಸಂಪೂರ್ಣ ಲಸಿಕೆ, 21% ಆಂಶಿಕ ಲಸಿಕೆ ಹಾಗೂ 48% ಜನತೆ ಲಸಿಕೆಯನ್ನೇ ಪಡೆದಿಲ್ಲ. ಲಸಿಕೆ ಪಡೆಯದವರು ಹೊಸ ಪ್ರಬೇಧದ ಸೋಂಕಿಗೆ ಒಳಗಾಗುವ ಮತ್ತು ಅದನ್ನು ಪ್ರಸರಿಸುವ ಅಪಾಯ ಹೆಚ್ಚಿದೆ . ಲಸಿಕೆ ಪಡೆದವರೂ ಮುನ್ನೆಚ್ಚರಿಕೆ ವಹಿಸಬೇಕು, ಇಲ್ಲದಿದ್ದರೆ ಹೊಸ ಆತಂಕಕಾರಿ ಸೋಂಕು ತಗುಲುವ ಅಪಾಯವಿದೆ ಎಂದವರು ಹೇಳಿದ್ದಾರೆ.

ಕೊರೋನ ಸೋಂಕು ಇನ್ನೂ ತೊಲಗಿಲ್ಲ ಎಂಬುದನ್ನು ಮರೆಯಬಾರದು. ಸೋಂಕಿನ ನಿಯಂತ್ರಣಕ್ಕೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ ಎಂದು ಡಾ. ಪೂನಮ್ ಹೇಳಿದ್ದಾರೆ.

ಆತಂಕಕಾರಿ ಸೋಂಕು : ನೂತನವಾಗಿ ಪತ್ತೆಯಾಗಿರುವ ಕೊರೋನ ಸೋಂಕಿನ ಪ್ರಬೇಧವನ್ನು ಆತಂಕಕಾರಿ ಸೋಂಕಿನ ವರ್ಗಕ್ಕೆ ಸೇರಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿ, ಇದಕ್ಕೆ ಒಮಿಕ್ರಾನ್ ಎಂದು ಹೆಸರಿಸಿದೆ. ಈ ಪ್ರಬೇಧದ ಪ್ರಸರಣ ಸಾಮರ್ಥ್ಯ ಮತ್ತು ಪರಿಣಾಮದ ಬಗ್ಗೆ, ಇದು ರೋಗನಿರ್ಣಯ, ಚಿಕಿತ್ಸೆ ಮತ್ತು ಲಸಿಕೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಸಂಶೋಧಕರು ಅಧ್ಯಯನ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News