ಇಸ್ರೇಲ್ ಜತೆ ನೀರು-ವಿದ್ಯುತ್‌ಶಕ್ತಿ ಒಪ್ಪಂದ ವಿರೋಧಿಸಿ ಜೋರ್ಡಾನ್‌ನಲ್ಲಿ ಪ್ರತಿಭಟನೆ

Update: 2021-11-28 05:58 GMT

ಅಮ್ಮಾನ್,: ನೀರಿಗೆ ಪ್ರತಿಯಾಗಿ ವಿದ್ಯುತ್ ಪಡೆಯುವ ಬಗ್ಗೆ ಇಸ್ರೇಲ್‌ನೊಂದಿಗೆ ಜೋರ್ಡಾನ್ ಮಾಡಿಕೊಂಡಿರುವ ಒಪ್ಪಂದವನ್ನು ವಿರೋಧಿಸಿ ಜೋರ್ಡಾನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.

ಒಪ್ಪಂದ ಜಾರಿಗೊಂಡರೆ, ಉಭಯ ದೇಶಗಳು 27 ವರ್ಷದ ಹಿಂದೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರದ ಬೃಹತ್ ಸಹಕಾರ ಯೋಜನೆ ಇದಾಗಿದೆ. ಈ ಒಪ್ಪಂದದ ಪ್ರಕಾರ, ಜೋರ್ಡಾನ್‌ಗೆ ಇಸ್ರೇಲ್ 200 ಮಿಲಿಯನ್ ಕ್ಯೂಬಿಕ್ ಮೀಟರ್ ಲವಣರಹಿತ ನೀರು ಒದಗಿಸುತ್ತದೆ, ಇದಕ್ಕೆ ಪ್ರತಿಯಾಗಿ , ಜೋರ್ಡಾನ್‌ನಲ್ಲಿರುವ ಯುಇಎ ಅನುದಾನದ ಸೌರ ವಿದ್ಯುತ್ ಘಟಕದಿಂದ ಇಸ್ರೇಲ್‌ಗೆ 600 ಮೆಗಾವ್ಯಾಟ್ ವಿದ್ಯುತ್ ಒದಗಿಸಬೇಕು.

ಈ ಒಪ್ಪಂದ ವಿರೋಧಿಸಿ ಜೋರ್ಡಾನ್‌ನಲ್ಲಿ ಶುಕ್ರವಾರ ನೂರಾರು ಮಂದಿ ಬೀದಿಗಿಳಿದು ಪ್ರತಿಭಟಿಸಿದರು. ಪೆಲೆಸ್ತೀನ್ ಪ್ರದೇಶದ ಮೇಲಿನ ಅತಿಕ್ರಮಣವನ್ನು ಇಸ್ರೇಲ್ ಮುಂದುವರಿಸಿದ್ದರೂ ಆ ದೇಶದೊಂದಿಗೆ ಸಂಬಂಧ ಸುಧಾರಣೆಗೆ ಜೋರ್ಡಾನ್ ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಬದುಕುವ ಹಕ್ಕು ಇದೆ, ಪೆಲೆಸ್ತೀನಿಯರಿಗೂ ಇದೆ. ನಾವು ಪೆಲೆಸ್ತೀನಿಯರನ್ನು ಬೆಂಬಲಿಸುತ್ತೇವೆ ಮತ್ತು ನಮ್ಮ ದೇಶದ ಬಗ್ಗೆ ಕಾಳಜಿ ವಹಿಸುತ್ತೇವೆ’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಒಪ್ಪಂದವನ್ನು ವಿರೋಧಿಸಿ ನವೆಂಬರ್ 23ರಂದು ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 16 ವಿದ್ಯಾರ್ಥಿಗಳನ್ನು ಜೋರ್ಡಾನ್‌ನ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ನೀರು-ವಿದ್ಯುತ್ ಒಪ್ಪಂದದ ‘ಉದ್ದೇಶದ ಘೋಷಣೆ’ ಪತ್ರಕ್ಕೆ ನವೆಂಬರ್ 22ರಂದು ದುಬೈಯಲ್ಲಿ ಜೋರ್ಡಾನ್‌ನ ಜಲಸಂಪನ್ಮೂಲ ಸಚಿವ , ಇಸ್ರೇಲ್‌ನ ಇಂಧನ ಸಚಿವ, ಯುಎಇಯ ಹವಾಮಾನ ಬದಲಾವಣೆ ಇಲಾಖೆ ಸಚಿವರು ಸಹಿ ಹಾಕಿದ್ದು, ಈ ಸಂದರ್ಭ ಅಮೆರಿಕದ ಹವಾಮಾನ ಬದಲಾವಣೆ ವಿಭಾಗದ ಪ್ರತಿನಿಧಿ ಜಾನ್ ಕೆರ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News