ಕೊರೋನ 3ನೆ ಅಲೆ ಆತಂಕ; ದ.ಕ. ಜಿಲ್ಲೆಯ ಗಡಿಗಳಲ್ಲಿ 3 ಪಾಳಿಯಲ್ಲಿ ತಪಾಸಣೆ ಆರಂಭ: ಡಿಸಿ ಡಾ. ರಾಜೇಂದ್ರ

Update: 2021-11-28 09:10 GMT

ಮಂಗಳೂರು, ನ. 28: ವಿದೇಶದಲ್ಲಿ ರೂಪಾಂತರಿತ ಕೊರೋನ ವೈರಸ್ ಪತ್ತೆ ಹಾಗೂ ಕೊರೋನ 3ನೆ ಅಲೆಯ ಆತಂಕದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಗಡಿ ಭಾಗಗಳಲ್ಲಿ ವಾಹನ ಸವಾರರ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.

ಕೊರೋನ 2ನೆ ಅಲೆ ಬಳಿಕ ಅನ್‌ಲಾಕ್‌ಗೊಂಡ ಬಳಿಕ ಮೂರು ತಿಂಗಳಲ್ಲಿ ನಾವು ಗಡಿಗಳಲ್ಲಿ ತಪಾಸಣೆ ಕಾರ್ಯವನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಲಾಗಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಲಸಿಕೀಕರಣ ಉತ್ತಮ ರೀತಿಯಲ್ಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಒಂದಷ್ಟು ಸಡಿಲಗೊಳಿಸಲಾಗಿತ್ತು. ಇದೀಗ ಸಂಭಾವ್ಯ 3ನೆ ಅಲೆಯನ್ನು ತಡೆಯಲು ಮುಖ್ಯಮಂತ್ರಿಯವರು ಪೊಲೀಸ್ ನಿಯೋಜನೆ ಮಾಡಲಾಗಿದೆ. ನಾಳೆಯಿಂದ ಇತರ ಇಲಾಖೆಯ ಅಧಿಕಾರಿಗಳನ್ನು ಕೂಡಾ ನಿಯೋಜಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ನಿರಂತರವಾಗಿ ಗಡಿ ಭಾಗದಲ್ಲಿ ಕೇರಳದಿಂದ ದ.ಕ. ಜಿಲ್ಲೆಗೆ ಪ್ರಯಾಣಿಸುವವರಿಗೆ ಕೇರಳದಲ್ಲಿಯೂ ಪರೀಕ್ಷೆ ತಪಾಸಣೆ ನಡೆಸಲಾಗುತ್ತಿದೆ. ಅದಲ್ಲದೆ ನಮ್ಮ ಗಡಿಯಲ್ಲೂ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಹಾಗಾಗಿ ನಿರಂತರವಾಗಿ ಪ್ರಯಾಣಿಸುವವರ ಪಟ್ಟಿಯೊಂದಿಗೆ ಗಡಿ ಭಾಗದಲ್ಲಿ ನಮ್ಮ ತಂಡದಿಂದ ತಪಾಣೆಯನ್ನು ಆರಂಭಿಸಲಾಗುವುದು.

ಕೇರಳ- ದ.ಕ. ಜಿಲ್ಲೆ ನಡುವೆ ಬಸ್ ಸಂಚಾರ ಆರಂಭಿಸಲಾಗಿದ್ದು ಸದ್ಯ ಅದು ಮುಂದುವರಿಯಲಿದೆ. ಆದರೆ ಎರಡೂ ಕಡೆಗಳಲ್ಲಿಯೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ವಾಹಗಳ ತಪಾಸಣೆ ನಡೆಸಲಾಗುತ್ತಿದೆ. ಅದಲ್ಲದೆ ಕಳೆದ 15 ದಿನಗಳಿಂದ ಕೇರಳದಿಂದ ಬಂದ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ. ಕ್ಯಾಂಪಸ್ ಮತ್ತು ಕಾಲೇಜುಗಳ ವಿದ್ಯಾರ್ಥಿಗಳನ್ನು ಮತ್ತೊಂದು ಸುತ್ತು ಸ್ಕ್ರೀನಿಂಗ್ ಮಾಡಲು ನಿರ್ದೇಶನ ನೀಡಲಾಗಿದೆ. ಹೆಚ್ಚಿನ ಲ್ಯಾಬ್‌ಟೆಕ್ನಿಶಿಯನ್‌ಗಳನ್ನು ನಿಯೋಜಿಸಿಲಾಗುವುದು. ಚುನಾವಣೆಯೂ ಇರುವುದರಿಂದ ನಮಗೆ ಇದೊಂದು ಸವಾಲು ಆಗಿದೆ. ಕೇರಳದಲ್ಲಿ ಪಾಸಿಟಿವಿಟಿ ದರ ಹೆಚ್ಚಿದ್ದರೂ ಕಾಸರಗೋಡಿನಲ್ಲಿ ಕಡಿಮೆ ಇದೆ. ಕಾಸರಗೋಡಿನ ಸುಮಾರು ಶೇ. 40 ಮಂದಿ ದ.ಕ. ಜಿಲ್ಲೆಯನ್ನು ವಿವಿಧ ಕಾರಣಗಳಿಂದ ಅವಲಂಬಿಸಿದ್ದಾರೆ. ಕಾಸರಗೋಡು ಮತ್ತು ದ.ಕ. ಜಿಲ್ಲೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಜನರಿಗೆ ತೊಂದರೆ ಆಗದಂತೆ ಹಾಗೂ ಜಿಲ್ಲೆಯಲ್ಲಿ ಸಂಭಾವ್ಯ 3ನೆ ಅಲೆ ಬಾರದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಭಿಪ್ರಾಯಿಸಿದ್ದಾರೆ.

ಪ್ರವಾಸ ಹೋದವರು, ಬರುವವರು ಕೂಡಾ ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕಾಗಿದೆ. ಅದು ಈಗಾಗಲೇ ಜಾರಿಯಲ್ಲಿದೆ. ನಮಗೆ ಸವಾಲು ಇರುವುದು ದಿನನಿತ್ಯ ಓಡಾಡುವವರದ್ದು. ತಲಪಾಡಿ ಗಡಿಯಲ್ಲಿ ನಿಮಿಷಕ್ಕೆ 60ಕ್ಕೂ ಅಧಿಕ ವಾಹನಗಳು ಓಡಾಡುವುದರಿಂದ ಅವುಗಳ ತಪಾಸಣೆಯನ್ನು ನಾವು ಮಾಡಬೇಕಾಗಿದೆ. ಪೊಲೀಸ್ ಹಾಗೂ ಇತರ ಇಲಾಖೆಗಳ ಸಹಕಾರದೊಂದಿಗೆ ಅದನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ.

ದಕ್ಷಿಣ ಆಫ್ರಿಕಾದಿಂದ ಇಲ್ಲಿಗೆ ಬಂದವರ ಪಟ್ಟಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿಲ್ಲಾಡಳಿತಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಬಂದವರನ್ನು ಮತ್ತೊಮ್ಮೆ ತಪಾಸಣೆಗೊಳಪಡಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಕಳೆದ 15 ದಿನಗಳಿಂದೀಚೆಗೆ ಬಂದವರ ಪಟ್ಟಿಯನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಮಂಗಳೂರಿಗೆ ದುಬೈಯಿಂದ ಬರುವವರು ಹೆಚ್ಚು. ಹಾಗೆ ಬರುವವರಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದರೆ ಅವರನ್ನು ತಪಾಸಣೆ ಮಾಡುವ ಎಲ್ಲಾ ವ್ಯವಸ್ಥೆಯೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಇದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಈಗಾಗಲೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳು ಜಾರಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News