ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತದೊಂದಿಗೆ ಸಂಬಂಧ ಕಡಿದುಕೊಂಡು ಗಣತಂತ್ರ ದೇಶವಾಗಲಿರುವ ಬಾರ್ಬಡೋಸ್

Update: 2021-11-28 11:33 GMT
Photo: ndtv

ಬಾರ್ಬಡೋಸ್: ಬ್ರಿಟಿಷ್ ರಾಜವಂಶದ ಜತೆಗಿನ ತನ್ನೆಲ್ಲ ಸಂಬಂಧಗಳನ್ನು ಕಡಿದುಕೊಳ್ಳಲು ಬಾರ್ಬಡೋಸ್ ನಿರ್ಧರಿಸಿದೆ. ಆದರೆ ವಿಶ್ವದ ಹೊಚ್ಚ ಹೊಸ ಗಣತಂತ್ರ ವ್ಯವಸ್ಥೆ ಎನಿಸಿದ ಬಾರ್ಬಡೋಸ್, ಕ್ರೂರ ಸಾಮ್ರಾಜ್ಯಶಾಹಿ ಇತಿಹಾಸ ಮತ್ತು ದೇಶದ ಪ್ರವಾಸೋದ್ಯಮದ ಮೇಲೆ ಕೋವಿಡ್-19 ಸಾಂಕ್ರಾಮಿಕ ಬೀರಿರುವ ಪರಿಣಾಮವು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆಕರ್ಷಕ ಕಡಲ ಕಿನಾರೆಗಳು ಮತ್ತು ಕ್ರಿಕೆಟ್ ಪ್ರೀತಿಗೆ ಹೆಸರಾದ ಬಾರ್ಬಡೋಸ್, ಇದುವರೆಗೆ ದೇಶದ ಮುಖ್ಯಸ್ಥರಾಗಿದ್ದ ರಾಣಿ ಎಲಿಜಬೆತ್ ಅವರ ಪ್ರತಿನಿಧಿಯ ಸ್ಥಾನಕ್ಕೆ ಗವರ್ನರ್ ಜನರಲ್ ಸಾಂಡ್ರಾ ಮಾಸನ್ ಅವರನ್ನು ಅಧಿಕಾರಕ್ಕೇರಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

ಸೋಮವಾರ ಸಂಜೆಯಿಂದ ಮಂಗಳವಾರದ ವರೆಗೆ ನಡೆಯುವ ಸಮಾರಂಭದಲ್ಲಿ ಮಿಲಿಟರಿ ಪರೇಡ್‌ಗಳು ಮತ್ತು ಮಾಸನ್ ಅವರನ್ನು ಅಧ್ಯಕ್ಷರನ್ನಾಗಿ ಅಧಿಕಾರಕ್ಕೆ ತರಲಾಗುತ್ತಿದೆ.

1834ರವರೆಗೆ ಊಳಿಗಮಾನ್ಯ ಪದ್ಧತಿ ಸೇರಿದಂತೆ ಹಲವು ಶತಮಾನಗಳ ಬ್ರಿಟಿಷ್ ಪ್ರಭಾವದಿಂದ ನಗುಲಿರುವ 2.85 ಲಕ್ಷಕ್ಕೂ ಅಧಿಕ ಜನರು ಹೊಸ ಯುಗದ ಕನಸು ಕಾಣುತ್ತಿದ್ದಾರೆ. 1966ರಲ್ಲಿ ಬಾರ್ಬಡೋಸ್ ಸ್ವತಂತ್ರ ರಾಷ್ಟ್ರವಾಗಿತ್ತು.

"ಬಾಲ್ಯದಲ್ಲಿದ್ದಾಗ ರಾಣಿಯ ಬಗ್ಗೆ ಕೇಳಿ ನನಗೆ ರೋಮಾಂಚನವಾಗುತ್ತಿತ್ತು. ಆದರೆ ನಾನು ಬೆಳೆದಂತೆಲ್ಲ ನನಗೆ ಹಾಗೂ ನನ್ನ ದೇಶಕ್ಕೆ ರಾಣಿ ಏನು ಎನ್ನುವ ಬಗ್ಗೆ ನಿಜಕ್ಕೂ ಅಚ್ಚರಿಯಾಗಲು ಆರಂಭವಾಯಿತು. ಬಾರ್ಬಡೋಸ್ ಮಹಿಳೆಯನ್ನು ಇದೀಗ ಅಧ್ಯಕ್ಷೆಯಾಗಿ ಹೊಂದುವುದು ನಿಜಕ್ಕೂ ಅದ್ಭುತ" ಎಂದು 50 ವರ್ಷದ ಮೀನು ಮಾರಾಟ ಮಾಡುವ ಶರೋನ್ ಬೆಲ್ಲಮಿ ಥಾಮ್ಸನ್ ಉದ್ಗರಿಸಿದರು.

ಈ ದ್ವೀಪರಾಷ್ಟ್ರದ ಆಧುನಿಕ ಅಸಮಾನತೆಗೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ ಹಾಗೂ ಗುಲಾಮಗಿರಿ ಕಾರಣ ಎಂದು ಯುವ ಹೋರಾಟಗಾರ್ತಿ, ಬಾರ್ಬಡೋಸ್ ಮುಸ್ಲಿಂ ಅಸೋಸಿಯೇಶನ್‌ನ ಸಂಸ್ಥಾಪಕಿ ರ‍್ಹಾನಾ ಬುಲ್‌ಬುಲಿಯಾ ಹೇಳುತ್ತಾರೆ. ಗುಲಾಮಗಿರಿಯ ಸಂಕೋಲೆ ಇದೀಗ ತುಂಡಾಗಿದ್ದರೂ, ಭಾವನಾತ್ಮಕ ಸರಪಣಿ ನಮ್ಮ ಮನಸ್ಥಿತಿಯಲ್ಲಿ ಹಾಗೆಯೇ ಉಳಿದಿದೆ ಎಂದು ಅವರು ಹೇಳುತ್ತಾರೆ.

ದೇಶದ ಪ್ರಧಾನಿ ಮಿಯಾ ಮೊಟ್ಲೆ ಅವರು, ಸಂಪೂರ್ಣ ಸಾಮ್ರಾಜ್ಯಶಾಹಿ ಇತಿಹಾಸಕ್ಕೆ ಮಂಗಳ ಹಾಡುತ್ತಿರುವುದಾಗಿ ಘೋಷಿಸಿದ ಒಂದು ವರ್ಷದ ಬಳಿಕ ಕಳೆದ ಅಕ್ಟೋಬರ್‌ನಲ್ಲಿ ಬಾರ್ಬಡೋಸ್, ಮಾಸನ್ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News