ಸ್ಕೌಟ್ಸ್- ಗೈಡ್ಸ್‌ನಿಂದ ದ.ಕ. ಜಿಲ್ಲಾ ಮಟ್ಟದ ಪ್ರಶಸ್ತಿಪತ್ರ ಪ್ರದಾನ

Update: 2021-11-28 11:15 GMT

ಮಂಗಳೂರು : ಸ್ಕೌಟ್ಸ್-ಗೈಡ್ಸ್ ಕೋರ್ಸ್ ಅಲ್ಲ ಅದೊಂದು ಜೀವನ ಶೈಲಿ. ಉತ್ತಮ ನಾಗರಿಕ ಮೌಲ್ಯವನ್ನು ಅದರಲ್ಲಿ ಕಲಿಯಬಹುದಾಗಿದೆ. ದೇಶ ಕಟ್ಟಲು ಬೇಕಾದ ದೊಡ್ಡ ಕೆಲಸವನ್ನು ಚಿಕ್ಕ ವಯಸ್ಸಿನಲ್ಲೇ ಕಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ದ.ಕ. ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಭಾನುವಾರ ಬಲ್ಮಠದ ಜಿಲ್ಲಾಧಿಕಾರಿ ನಿವಾಸದಲ್ಲಿ ಆಯೋಜಿಸ ಲಾದ ಜಿಲ್ಲಾ ಮಟ್ಟದ ಪ್ರಶಸ್ತಿಪತ್ರ ಪ್ರದಾನ ಸಮಾರಂಭದಲ್ಲಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಿ ಅವರು ಮಾತನಾಡಿದರು.

ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ.ಮೋಹನ್ ಆಳ್ವ, ಜಿಲ್ಲೆಯಲ್ಲಿ 1921ರಲ್ಲಿ ಆರಂಭವಾದ ಸ್ಕೌಟಿಂಗ್ ಮತ್ತು ಗೈಡಿಂಗ್ ಚಟುವಟಿಕೆಗಳು ಇಂದು ಶತಮಾನೋತ್ಸವದ ಹೊಸ್ತಿಲಲ್ಲಿದೆ. ನೂರು ವರ್ಷದ ನೆನಪಿಗಾಗಿ ಆಂದೋಲನ ಆಯೋಜಿಸಲು ಉದ್ದೇಶಿಸಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಳಿಸಬೇಕು ಎನ್ನುವ ಆಶಯ ಹೊಂದಲಾಗಿದೆ. ಸಂಖ್ಯಾಬಲ ಹಾಗೂ ಚಟುವಟಿಕೆಯಲ್ಲಿ ಸತತ 23 ವರ್ಷಗಳಿಂದ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು.

ಜಿಲ್ಲಾಧಿಕಾರಿಯವರ ಪತ್ನಿ ಡಾ.ವರ್ಷಿತಾ, ಜಿಲ್ಲಾ ಆಯುಕ್ತೆ (ಗೈಡ್ಸ್) ಶುಭಾ ವಿಶ್ವನಾಥ್, ಜಿಲ್ಲಾ ಉಪಾಧ್ಯಕ್ಷರಾದ ವಸಂತ ರಾವ್, ವಿನ್ಸೆಂಟ್ ಡಿಕೋಸ್ತಾ ಉಪಸ್ಥಿತರಿದ್ದರು.

ಸಹ ಕಾರ್ಯದರ್ಶಿ ವಸಂತ ದೇವಾಡಿಗ, ಜಿಲ್ಲಾ ಸಂಘಟನಾ ಆಯುಕ್ತ ಶಾಂತಾರಾಮ್, ಸಂಘಟನಾ ಆಯುಕ್ತೆ (ಗೈಡ್ಸ್) ಸುನಿತಾ, ಜಿಲ್ಲಾ ತರಬೇತಿ ಆಯುಕ್ತೆ (ಗೈಡ್ಸ್) ಜಯಶ್ರೀ ಪ್ರಮಾಣ ಪತ್ರ ಪಡೆದ ಶಾಲೆಗಳ ವಿವರ ವಾಚಿಸಿದರು.

ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್ ಜೆ.ಸ್ವಾಗತಿಸಿ, ಕಾರ್ಯದರ್ಶಿ ಎಂ.ಜಿ.ಕಜೆ ವಂದಿಸಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ನಿರೂಪಿಸಿದರು.

1120 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ

ಕೋವಿಡ್ ಕಾರಣದಿಂದ ಈ ಬಾರಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗಿದ್ದು, 1120 ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಪಡೆದುಕೊಂಡಿದ್ದಾರೆ. ತೃತೀಯ ಚರಣ ಕಬ್ಸ್‌ನಲ್ಲಿ 23 ಶಾಲೆಗಳ 211 ಕಬ್ಸ್, ಸುವರ್ಣಗರಿ ಬುಲ್‌ಬುಲ್ಸ್‌ನಲ್ಲಿ 23 ಶಾಲೆಗಳಿಂದ 242 ಬುಲ್‌ಬುಲ್ಸ್, ತೃತೀಯ ಸೋಪಾನ ಸ್ಕೌಟ್ಸ್‌ನಲ್ಲಿ 35 ಶಾಲೆಗಳ 229 ಸ್ಕೌಟ್ಸ್, ತೃತೀಯ ಸೋಪಾನ ಗೈಡ್ಸ್‌ನಲ್ಲಿ 49 ಶಾಲೆಗಳ 342 ಗೈಡ್ಸ್, ನಿಪುಣ್ ರೋವರ್ಸ್‌ನಲ್ಲಿ 8 ಕಾಲೇಜುಗಳ 44 ರೋವರ್ಸ್‌, ನಿಪುಣ್ ರೇಂಜರ್ಸ್‌ನಲ್ಲಿ 11 ಕಾಲೇಜುಗಳ 52 ರೇಂಜರ್ಸ್‌ ಪ್ರಶಸ್ತಿಪತ್ರ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News