ಪ್ರವಾಸೋದ್ಯಮ ದೃಷ್ಟಿಯಿಂದ ಕಾರ್ಕಳ ಉತ್ಸವ : ಸುನಿಲ್‌ ಕುಮಾರ್‌

Update: 2021-11-28 11:21 GMT

ಕಾರ್ಕಳ : ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ಸಲ್ಲಿಸಿರುವ ಕಾರ್ಕಳದ ಪರಂಪರೆಯನ್ನು ಮುಂದುವರಿಸುವ ಮತ್ತು ಕಾರ್ಕಳವನ್ನು ಪ್ರವಾಸೋದ್ಯಮ ತಾಣವಾಗಿ ದೇಶದ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಕಳ ಉತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಕಳ ನಮ್ಮೆಲ್ಲರ ಉತ್ಸವವಾಗಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಅವರು ನ. 28ರಂದು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಕಾರ್ಕಳ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಾರ್ಕಳಕ್ಕೆ ಕೊಡುಗೆ ಸಲ್ಲಿಸುವಂತಾಗಬೇಕು. ಕಾರ್ಕಳವನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಕಾರ್ಯವಾಗಬೇಕು. ನಂದಳಿಕೆ ಕವಿ ಮುದ್ದಣ, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಜಿನರಾಜ ಹೆಗ್ಡೆ, ಶ್ರೇಷ್ಠ ಶಿಲ್ಪಿಗಳಾದ ರೆಂಜಾಳ ಗೋಪಾಲ ಶೆಣೈ, ಶ್ಯಾಮರಾಯ ಆಚಾರ್ಯ, ಸಾಹಿತಿಗಳಾದ ಎಂ. ವೀರಪ್ಪ ಮೊಯ್ಲಿ, ಎಂ. ರಾಮಚಂದ್ರ ಅವರ ಕೊಡುಗೆ ಅನನ್ಯವಾದುದು. ಆ ಪರಂಪರೆಯನ್ನು ಸ್ಮರಿಸುವ, ಮುಂದುವರಿಸುವ ಹಿನ್ನೆಲೆಯಲ್ಲಿ ಕಾರ್ಕಳ ಉತ್ಸವ ಅತ್ಯಂತ ಅಭೂತಪೂರ್ವವಾಗಿ ನಡೆಯಲಿದೆ. ಕಾರ್ಕಳದ ಧಾರ್ಮಿಕ, ಜಾನಪದ, ಐತಿಹಾಸಿಕ ತಾಣ ಮತ್ತು ಕಾರ್ಕಳದ ಜಲಪಾತಗಳನ್ನು  ಮತ್ತಷ್ಟು ಪ್ರಸಿದ್ಧಿಗೆ ತರುವಂತಾಗಲಿದೆ ಎಂದರು.

ಬೇರೆ ಬೇರೆ ಜಿಲ್ಲೆಯ ಸುಮಾರು 150 ಕಲಾ ತಂಡ ಕಾರ್ಕಳ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ನಾಡಿನ ಹೆಸರಾಂತ ಕಲಾವಿದರು ಭಾಗವಹಿಸಲಿದ್ದಾರೆ. 9 ದಿನಗಳ ಕಾಲ ಕನ್ನಡ, ತುಳು, ಕೊಂಕಣಿಯ ಎಲ್ಲ ಪ್ರಕಾರದ ನಾಟಕ, ನೃತ್ಯ, ಸಂಗೀತ ನಡೆಯಲಿದ್ದು ಕಾರ್ಕಳದ 50 ಸಾವಿರ ಕುಟುಂಬಗಳು ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ತಾವೇ ಪ್ರೇಕ್ಷಕರಾಗಿ, ಸ್ವಯಂ ಸೇವಕ ರಾಗಿ ಕಾರ್ಯನಿರ್ವಹಿಸಬೇಕೆಂದು ಸುನಿಲ್‌ ಕುಮಾರ್‌ ಮನವಿ ಮಾಡಿಕೊಂಡರು. 

ಕಾರ್ಕಳ ನಗರವನ್ನು ವಿದ್ಯುತ್‌ ದೀಪದಿಂದ ಕಂಗೊಳಿಸುವಂತೆ ಮಾಡಲಾಗುವುದು. ಕಾರ್ಕಳದ ಪ್ರತಿ ಮನೆಗಳನ್ನು ತಳಿರು ತೋರಣಗಳಿಂದ ಶೃಂಗರಿಸುವಂತಾಗಬೇಕು. ಹೊಸ ಬಟ್ಟೆ ಖರೀದಿಸುವ ಮೂಲಕ ಹಬ್ಬದ ವಾತಾವರಣವಿರಬೇಕೆಂದರು.

ನಾಗಪುರ, ಪುಣೆ, ಮುಂಬೈಯಿಂದ ಗಾಳಿಪಟ ಬರಲಿವೆ. ಗೂಡುದೀಪ ಉತ್ಸವ ನಡೆಯಲಿದೆ. ಡಿ. 20 ರಿಂದ 24ರವರೆಗೆ ಹೆಲಿಕಾಪ್ಟರ್‌ ಉತ್ಸವವಿದ್ದು,  10ರಿಂದ 12 ನಿಮಿಷ ಹೆಲಿಕಾಪ್ಟರ್‌ ಪ್ರಯಾಣ ಮಾಡಬಹುದಾಗಿದೆ. 6 ಸೀಟರ್‌ ಹೊಂದಿರುವ ಹೆಲಿಕಾಪ್ಟರ್‌ನಲ್ಲಿ ಕುಟುಂಬ ಸಮೇತ ಪ್ರಯಾಣಿಸಬಹುದಾಗಿದೆ ಎಂದು ಸುನಿಲ್‌ ತಿಳಿಸಿದರು.

ಕಾಶ್ಮೀರ, ರಾಜಸ್ಥಾನ, ತಮಿಳುನಾಡು, ಕೇರಳದಿಂದ ವಸ್ತುಪ್ರದರ್ಶನ ಮಳಿಗೆಗಳು ಆಗಮಿಸಲಿವೆ. ಕಾರ್ಕಳದ ಅಭಿವೃದ್ಧಿ ಚಟುವಟಿಕೆ, ತುಳುನಾಡಿನ ವೈಭವ ಸಾರುವ ಮಳಿಗೆಗಳು ಸ್ವರಾಜ್‌ ಮೈದಾನದ ಪಕ್ಕದಲ್ಲಿ ಸ್ಥಾಪಿತವಾಗಲಿದೆ. ಚಿತ್ರ ಕಲೆ, ವಿದ್ಯಾರ್ಥಿಗಳ ಅನುಕೂಲತೆಗಾಗಿ ವಿಜ್ಞಾನ ಮೇಳ, ವೆಜ್‌, ನಾನ್‌ ವೆಜ್‌ ಆಹಾರೋತ್ಸವ ಮಳಿಗೆಗಳಿರಲಿವೆ ಎಂದು ವಿವರಿಸಿದರು. 

ಡಿ. 24ರಂದು ಬಂಡಿಮಠದಿಂದ ಸ್ವರಾಜ್‌ ಮೈದಾನದವರೆಗೆ ಉತ್ಸವ ಮೆರವಣಿಗೆ ಸಾಗಲಿದೆ. 150 ಕಲಾತಂಡಗಳು ಮೆರವಣಿಗೆ ಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದ ಸುನಿಲ್‌ ಕುಮಾರ್‌ ಇಡೀ ಸಮಾರಂಭದಲ್ಲಿ ಯಾವೊಂದು ಕೊರತೆಯಾಗದಂತೆ ನಾವು ನೋಡಿಕೊಳ್ಳಬೇಕಾಗಿದೆ. ಅದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳುವಂತೆ ವಿನಂತಿಸಿದರು.

ಕಾರ್ಯಕ್ರಮದ ಪೋಸ್ಟರ್‌, ಸ್ಟಿಕ್ಕರ್‌ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. 

ಪ್ರಾಸ್ತಾವಿಕ ಮಾತನಾಡಿದ ಶಿಕ್ಷಕ ರಾಜೇಂದ್ರ ಭಟ್‌ ಕಾರ್ಕಳ ತಾಲೂಕಾಗಿ ನೂರು ವರ್ಷ ತುಂಬಿದ ನಿಟ್ಟಿನಲ್ಲಿ ಕಾರ್ಕಳ ಉತ್ಸವ ಸಡಗರದಿಂದ ನಡೆಯಲಿದೆ. ಮುಂದಿನ ದಿನಗಳಲ್ಲಿ ಕಾರ್ಕಳ ಉತ್ಸವ ಹಂಪಿ ಉತ್ಸವದಂತೆ ವೈಭವದಿಂದ ಮುಂದುವರಿಯಲಿದೆ ಎಂದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಮಾತನಾಡಿ, ಕೊರೋನ ಮರೆತು ಮತ್ತೆ ಜೀವನ ಉತ್ಸಾಹ ತುಂಬುವಲ್ಲಿ ಕಾರ್ಕಳ ಉತ್ಸವ ನೆರವಾಗಲಿದೆ. ನಾವೆಲ್ಲರೂ ಇದರ ಯಶಸ್ಸಿಗಾಗಿ ಶ್ರಮಿಸೋಣ ಎಂದರು.

ವೇದಿಕೆಯಲ್ಲಿ ಅಶೋಕ್‌ ಅಡ್ಯಂತಾಯ, ಕೊಂಡಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಜಗದೀಶ್‌ ಪೈ, ನಿವೃತ್ತ ಶಿಕ್ಷಕ ವಿಠಲ್‌ ಬೇಲಾಡಿ, ಕಂಬಳ ಅಕಾಡಮಿಯ ಗುಣಪಾಲ್‌ ಕಡಂಬ, ಹರೀಶ್ಚಂದ್ರ ಕಾಬೆಟ್ಟು, ಸಂಜೀವ ಜೋಗಿ, ಕೆ.ಪಿ.ಶೆಣೈ, ಪುಂಡಲಿಕ ಮರಾಠೆ ಉಪಸ್ಥಿತರಿದ್ದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿ, ಜಾನಪದ ಪರಿಷತ್‌ ತಾಲೂಕು ಅಧ್ಯಕ್ಷ ದೇವದಾಸ್‌ ಕೆರೆಮನೆ ನಿರೂಪಿಸಿದರು. ಶಿಕ್ಷಕ ಮುನಿರಾಜ್‌ ರೆಂಜಾಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News