ಪಡುಬಿದ್ರಿ: ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

Update: 2021-11-28 11:36 GMT

ಪಡುಬಿದ್ರಿ: ವಿದೇಶಕ್ಕೆ ತೆರಳಬೇಕಾದ ವ್ಯಕ್ತಿಯೋರ್ವರ ಅಗತ್ಯ ದಾಖಲೆ ಪತ್ರಗಳಿದ್ದ ಬ್ಯಾಗ್ ರಿಕ್ಷಾದಲ್ಲಿ ಪತ್ತೆಯಾಗಿದ್ದು, ಅದನ್ನು ವಾರಸುದಾರರಿಗೆ ಮರಳಿಸುವ ಮೂಲಕ ಪಡುಬಿದ್ರಿಯ ರಿಕ್ಷಾ ಚಾಲಕ ಫಲಿಮಾರಿನ ನಿವಾಸಿ ಮಜೀದ್ ಪ್ರಾಮಾಣಿಕತೆ ಮೆರೆದಿದ್ದಾರೆ.

ಹೆಜಮಾಡಿಯ ನಿವಾಸಿ ದುಬೈಯಲ್ಲಿ ಉದ್ಯೋಗಿಯಾಗಿರುವ ಗಣನಾಥ್ ಮಲ್ಲಿ ಅವರು ರಜೆಯಲ್ಲಿ ಊರಿಗೆ ಮರಳಿ ಶುಕ್ರವಾರ ತೆರಳಲು ಸಿದ್ಧತೆ ನಡೆಸುತಿದ್ದರು. ಗುರುವಾರ ಅವರು ಪಡುಬಿದ್ರಿಯ ರಿಕ್ಷಾದಲ್ಲಿ ಮನೆಗೆ ತೆರಳಿದರು. ರಿಕ್ಷಾದಲ್ಲಿ ಎರಡು ಬ್ಯಾಗ್‍ ಗಳನ್ನು ಇರಿಸಿದ್ದರು. ರಿಕ್ಷಾದಿಂದ ಇಳಿದು ಮನೆಯಲ್ಲಿ ಇಳಿದ ನೋಡಿದಾಗ ಒಂದು ಬ್ಯಾಗ್ ನಾಪತ್ತೆಯಾಗಿತ್ತು. ಅವರು ಅದನ್ನು ಮರೆತು ರಿಕ್ಷಾದಲ್ಲಿ ಬಿಟ್ಟು ಹೋಗಿದ್ದರು.

ಕೂಡಲೇ ಅವರ ಸ್ನೇಹಿತ ಪ್ರದೀಪ್ ರಾಜ್ ಅವರಿಗೆ ಸುದ್ದಿ ಮುಟ್ಟಿಸಿದರು. ಅವರು ಬಂದು ರಾತ್ರಿವರೆಗೂ ರಿಕ್ಷಾವನ್ನು ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಮರುದಿವಸ ಬೆಳಗ್ಗೆ ರಿಕ್ಷಾ ಚಾಲಕ ಫಲಿಮಾರಿನ ನಿವಾಸಿ ಮಜೀದ್ ಅವರು ರಿಕ್ಷಾವನ್ನು ಪರಿಶೀಲಿಸುತ್ತಿರುವಾಗ ಬ್ಯಾಗ್ ಪತ್ತೆಯಾಗಿತ್ತು. ಪಡುಬಿದ್ರಿ ರಿಕ್ಷಾ ನಿಲ್ದಾಣಕ್ಕೆ ಬಂದು ಬ್ಯಾಗ್ ಪತ್ತೆಯಾಗಿರುವುದನ್ನು ತನ್ನ ಸ್ನೇಹಿತರಲ್ಲಿ ವಿಷಯ ತಿಳಿಸಿದರು. ಕಂಚಿನಡ್ಕ ನಿವಾಸಿ ರಿಕ್ಷಾ ಚಾಲಕ ಮುಹಮ್ಮದ್ ರಿಯಾಝ್  ಬ್ಯಾಗಿನ ವಾರಸುದಾರ ರನ್ನು ಪತ್ತೆ ಹಚ್ಚಿದರು. ಅವರ ಸ್ನೇಹಿತ ಪ್ರದೀಪ್ ರಾಜ್‍ಗೆ ಸುದ್ದಿ ಮುಟ್ಟಿಸಿ ಬ್ಯಾಗ್ ಹಸ್ತಾಂತರಿಸಿದರು.

ಈ ಬ್ಯಾಗ್‍ನಲ್ಲಿ ವಿದೇಶಕ್ಕೆ ತೆರಳಬೇಕಾದ ಎಲ್ಲಾ ಅಗತ್ಯ ದಾಖಲೆ ಪತ್ರಗಳು ಇದ್ದವು. ಬ್ಯಾಗ್ ಮರಳಿಸಿದ ರಿಕ್ಷಾ ಚಾಲಕರಾದ ಮಜೀದ್‍ನನ್ನು ಪ್ರದೀಪ್ ರಾಜ್ ಹಾಗೂ ಗಣನಾಥ್ ಮಲ್ಲಿ ಅಭಿನಂದಿಸಿದ್ದಾರೆ. ಒಂದು ವೇಳೆ ಈ ಬ್ಯಾಗ್ ಸಿಗದೇ ಇದ್ದಲ್ಲಿ ವಿದೇಶಕ್ಕೆ ತೆರಳುವುದು ಕಷ್ಟವಾಗುತಿತ್ತು ಎಂದು ಗಣನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News