ಕೇಂದ್ರ ಬಿಜೆಪಿ ಸರಕಾರದಿಂದ ಆರೆಸ್ಸೆಸ್‌ನ ಅಜೆಂಡಾ ಜಾರಿ: ವಸಂತ ಆಚಾರಿ ಆರೋಪ

Update: 2021-11-28 15:03 GMT

ಉಡುಪಿ, ನ. 28: ಕೇಂದ್ರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಾವು ಅಪಾಯಕಾರಿ ಸ್ಥಿತಿಯಲ್ಲಿ ಇದ್ದೇವೆ. ಈ ಸರಕಾರ ಆರೆಸ್ಸೆಸ್‌ನ ಅಜೆಂಡಾವನ್ನು ಪೂರ್ಣವಾಗಿ ಜಾರಿ ಮಾಡುವ ಕೆಲಸ ಮಾಡುತ್ತಿದೆ. ಆದುದರಿಂದ ನಾವು ಬಲಂಪಂಥೀಯ ಆರ್ಥಿಕ ಧೋರಣೆಗಳನ್ನು ವಿರೋಧಿಸುವುದರ ಜೊತೆಗೆ ದೇಶದ ಐಕ್ಯತೆಗೆ ಧಕ್ಕೆ ತರುವ ಹಿಂದುತ್ವ ಸಿದ್ಧಾಂತದ ವಿರುದ್ಧವೂ ಹೋರಾಟ ಮಾಡಬೇಕಾಗಿದೆ ಎಂದು ಸಿಪಿಐಎಂ ಪಕ್ಷದ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ತಿಳಿಸಿದ್ದಾರೆ.

ಉಡುಪಿಯ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ರವಿವಾರ ಆಯೋಜಿಸಲಾದ ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ ಇದರ ಏಳನೇ ಉಡುಪಿ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನೋಟು ರದ್ಧತಿ, ಸಿಎಎ ಎನ್‌ಆರ್‌ಸಿ, ಕೃಷಿ ಕಾಯಿದೆ, ಶಿಕ್ಷಣ ನೀತಿ ಇವುಗಳೆಲ್ಲವೂ ಇವರ ಸಿದ್ಧಾಂತದ ಭಾಗವಾಗಿದೆ. ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಸಿದ್ಧಾಂತವನ್ನು ಸೋಲಿಸುವ ಕಾರ್ಯವನ್ನು ಕೂಡ ಈ ಸರಕಾರ ಮಾಡುತ್ತಿದೆ. ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾರ್ಕ್ಸ್‌ವಾದದಿಂದ ಮಾತ್ರ ಸಾಧ್ಯವಾಗುತ್ತದೆ. ಆದುದರಿಂದ ಸಿಪಿಐಎಂ ಪಕ್ಷವನ್ನು ಇನ್ನಷ್ಟು ಬಲಿಷ್ಠ ವಾಗಿ ಕಟ್ಟಬೇಕಾಗಿದೆ ಎಂದರು.

ಹಿಂದುಗಳ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಪರಿವಾರ ದುರ್ಬಳಕೆ ಮಾಡುತ್ತಿದೆ. ದೇವಸ್ಥಾನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಬ್ಯಾನರ್‌ಗಳನ್ನು ಹಾಕುವ ಮೂಲಕ ಸಂಘಪರಿವಾರ ಹಿಂದುಗಳ ಸಂಘಟನೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಕೋಲ, ಜಾತ್ರೆ, ಯಕ್ಷಗಾನ, ಶಾಲಾ ಕಾಲೇಜು ಆವರಣಗಳು ಸೇರಿದಂತೆ ಎಲ್ಲವೂ ಕೇಸರಿಕರಣವಾಗುತ್ತಿದೆ. ಈ ಅಪಾಯವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಲಿಷ್ಠ ಹೋರಾಟ ಕಟ್ಟಬೇಕಾಗಿದೆ. ಆ ಮೂಲಕ ಕೋಮುವಾದವನ್ನು ನಾಶ ಮಾಡಿ ಕೋಮು ಸೌಹಾರ್ದತೆಯನ್ನು ಕಟ್ಟುವ ಕಾರ್ಯ ಮಾಡಬೇಕಾ ಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಅವ್ಯಕ್ಷ ಅದಮಾರು ಶ್ರೀಪತಿ ಆಚಾರ್ಯ, ಕಾರ್ಯದರ್ಶಿ ಶಶಿಧರ ಗೊಲ್ಲ, ಕೋಶಾಧಿಕಾರಿ ಕವಿರಾಜ್, ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ್ ಕಲ್ಲಾಗರ, ಸಿಪಿಎಂ ಮುಖಂಡರಾದ ಪಿ.ವಿಶ್ವನಾಥ ರೈ, ಎಚ್.ನರಸಿಂಹ, ಮಹಾಬಲ ವಡೇರಹೋಬಳಿ ಉಪಸ್ಥಿತರಿದ್ದರು.

ಸಿಪಿಐಎಂ ರಾಜ್ಯ ಉಪಾಧ್ಯಕ್ಷ ಕೆ.ಶಂಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ವೆಂಕಟೇಶ್ ಕೋಣಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಟ ಮೆರವಣಿಗೆ ಕೆ.ಎಂ.ಮಾರ್ಗ, ಜೋಡು ರಸ್ತೆ, ಅಜ್ಜರ ಕಾಡು, ಬ್ರಹ್ಮಗಿರಿಯಾಗಿ ಲಯನ್ಸ್ ಭವನದಲ್ಲಿ ಸಮಾಪ್ತಿಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News