ಧರ್ಮದ ಹೆಸರಿನಲ್ಲಿ ಪ್ರತ್ಯೇಕ ಸಮಾಜ ನಿರ್ಮಾಣ ಅಪಾಯಕಾರಿ: ಪ್ರೊ.ಬಿ.ಶಿವರಾಮ ಶೆಟ್ಟಿ

Update: 2021-11-28 15:16 GMT

ಉಡುಪಿ, ನ.28: ತುಳುವರು ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ತಾರತಮ್ಯ ಇಲ್ಲದ ಒಗ್ಗಟ್ಟಿನ ಸಮಾಜ ಕಟ್ಟಿದ್ದರು. ಆದರೆ ಪ್ರಸ್ತುತ ಈ ಸಮಾಜವನ್ನು ವಿಂಗಡಿಸಿ ಪ್ರತ್ಯೇಕ ಧರ್ಮದ ಆಧಾರದಲ್ಲಿ ಸಮಾಜವನ್ನು ನಿರ್ಮಿಸಲಾಗುತ್ತಿದೆ. ಇಂತಹ ಧಾರ್ಮಿಕತೆ ಸಮಾಜದಿಂದ ಸೃಜನಶೀಲತೆ ಹುಟ್ಟುವುದಿಲ್ಲ ಎಂದು ಮೈಸೂರು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನದ ಯೋಜನಾ ನಿರ್ದೇಶಕ, ಹಿರಿಯ ಜನಪದ ವಿದ್ವಾಂಸ ಪ್ರೊ.ಬಿ. ಶಿವರಾಮ ಶೆಟ್ಟಿ ಹೇಳಿದ್ದಾರೆ.

ಯುವವಾಹಿನಿ ಉಡುಪಿ ಘಟಕ ಆಶ್ರಯದಲ್ಲಿ ಚಿಟ್ಪಾಡಿಯ ಲಕ್ಷ್ಮೀ ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಜಾತಿ ಸಂಘಟನೆಗಳು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರಬಾರದು. ತುಳುವರಂತೆ ವಿಶಾಲ ಹೃದಯ ವೈಶಾಲ್ಯತೆ ಮೈಗೂಡಿಸಿಕೊಂಡು ಎಲ್ಲಾ ಧರ್ಮ, ಜಾತಿಯನ್ನು ಒಗ್ಗಟ್ಟಿನಲ್ಲಿ ಜೋಡಿಸಿಕೊಳ್ಳಬೇಕು. ಜನಪದಕ್ಕೆ ಉಸಿರು ಕೊಡುವ ಮಹಾನ್ ಶಕ್ತಿ ಇದ್ದು, ಈ ನಿಟ್ಟಿನಲ್ಲಿ ಊರು, ದೇಶ ಕಟ್ಟುವುದಕ್ಕೆ ಮುಂದಾಗಬೇಕು ಎಂದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ದುಗ್ಗಪ್ಪ ಕಜೆಕಾರು ಅಭಿನಂದನಾ ಭಾಷಣ ಮಾಡಿ, ಸಂಶೋಧನೆ ಕೇವಲ ಪಿಎಚ್‌ಡಿ ಅಲ್ಲ. ಅದೊಂದು ವ್ಯವಸ್ಥಿತ ಅಧ್ಯಯನ. ಪ್ರಸ್ತುತ ಪಿಎಚ್‌ಡಿಗಳ ಉಪಯೋಗ ಜನಸಾಮಾನ್ಯರಿಗೆ ಆಗುತ್ತಿಲ್ಲ ಎಂದು ತಿಳಿಸಿದರು.

ಯುವವಾಹನಿ ಉಡುಪಿ ಘಟಕ ಅಧ್ಯಕ್ಷ ಪ್ರವೀಣ್ ಡಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜನಪದ ಕಲಾವಿದ ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ಸೀತಾರಾಮ್ ಕುಮಾರ್ ಕಟೀಲ್ ಅವರಿಗೆ ಪ್ರದಾನ ಮಾಡಲಾಯಿತು. ರೂಬಿಕ್ಸ್ ಕ್ಯೂಬ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ಮಹೇಶ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ. ಸುರೇಶ್ ರೈ ಕೆ. ಪ್ರಶಸ್ತಿ ಪ್ರದಾನ ಮಾಡಿದರು. ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಕೆ. ರಾಜೀವ ಪೂಜಾರಿ, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಉಪಸ್ಥಿತರಿದ್ದರು.

ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಭಾಸ್ಕರ ಸುವರ್ಣ ಸ್ವಾಗತಿಸಿದರು. ಮಹಾಬಲ ಅಮೀನ್ ವಂದಿಸಿದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News