ಮಣಿಪಾಲ; ಅಪಘಾತ ಪ್ರಕರಣಕ್ಕೆ ಕೋಮುಬಣ್ಣ ಹಚ್ಚುವ ಯತ್ನ: ಠಾಣೆಗೆ ಮುತ್ತಿಗೆ

Update: 2021-11-28 16:13 GMT

ಮಣಿಪಾಲ, ನ.28: ರಸ್ತೆ ಅಪಘಾತಕ್ಕೆ ಸಂಬಂಧಿಸಿ ಉಡುಪಿ ನಗರಸಭೆ ಬಿಜೆಪಿ ಸದಸ್ಯ ಹಾಗೂ ಕಾರು ಚಾಲಕನ ಮಧ್ಯೆ ತಳ್ಳಾಟ ನಡೆದಿದ್ದು, ತಣ್ಣಗಾಗಿದ್ದ ಈ ವಿಚಾರಕ್ಕೆ ಕೆಲವರು ಕೋಮುಬಣ್ಣ ಹಚ್ಚುವ ಯತ್ನ ನಡೆಸಿರುವ ಬಗ್ಗೆ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮಣಿಪಾಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸದ್ಯ ಇಬ್ಬರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಲಾಗಿದ್ದು, ತಪ್ಪು ಸಂದೇಶದಿಂದ ಉಂಟಾದ ಈ ವಿವಾದವನ್ನು ಪೊಲೀಸರು ರಾಜಿ ಸಂಧಾನದ ಮೂಲಕ ಸುಖಾಂತ್ಯ ಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪರ್ಕಳದಲ್ಲಿ ಇಂದು ಸಂಜೆ ಎರಡು ಕಾರುಗಳ ಮಧ್ಯೆ ಢಿಕ್ಕಿಯಾಗಿದ್ದು, ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್, ಇವರ ಮಧ್ಯ ಪ್ರವೇಶಿಸಿದರೆನ್ನಲಾಗಿದೆ. ಆಗ ಕಾರು ಚಾಲಕ ಮತ್ತು ಯೋಗೀಶ್ ಸಾಲ್ಯಾನ್ ಮಧ್ಯೆ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆಯಿತ್ತೆನ್ನಲಾಗಿದೆ. ಈ ಸಂಬಂಧ ಇಬ್ಬರನ್ನು ಮಣಿಪಾಲ ಪೊಲೀಸರು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದರೆಂದು ತಿಳಿದುಬಂದಿದೆ.

ಬಳಿಕ ಇದೇ ವಿಚಾರಕ್ಕೆ ಕೋಮು ಬಣ್ಣ ಹಚ್ಚಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಮಲ್ಪೆ, ಉಡುಪಿ, ಪಡುಬಿದ್ರೆ ಕಡೆಯಿಂದ ಬಿಜೆಪಿ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News