ಬಿಜೆಪಿ ಸಂಸದ ಗೌತಮ್ ಗಂಭೀರ್‌ಗೆ ಮತ್ತೆ ‘ಐಸಿಸ್ ಕಾಶ್ಮೀರ’ದಿಂದ ಜೀವ ಬೆದರಿಕೆ

Update: 2021-11-28 16:21 GMT

ಹೊಸದಿಲ್ಲಿ, ನ.28: ಮಾಜಿ ಕ್ರಿಕೆಟಿಗ ಮತ್ತು ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ‘ಐಸಿಸ್ ಕಾಶ್ಮೀರ’ದಿಂದ ಮತ್ತೊಮ್ಮೆ ಜೀವ ಬೆದರಿಕೆ ಬಂದಿದ್ದು,ಇದು ಆರು ದಿನಗಳಲ್ಲಿ ಇಂತಹ ಮೂರನೇ ಬೆದರಿಕೆಯಾಗಿದೆ ಎಂದು ಪೊಲೀಸರು ರವಿವಾರ ಇಲ್ಲಿ ತಿಳಿಸಿದರು.

ನಿಮ್ಮ ದಿಲ್ಲಿ ಪೊಲೀಸರು ಮತ್ತು ಐಪಿಎಸ್ ಶ್ವೇತಾ (ಡಿಸಿಪಿ) ಏನೂ ಮಾಡಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆಯಲ್ಲಿಯೂ ನಮ್ಮ ಬೇಹುಗಾರರಿದ್ದಾರೆ. ನಿಮ್ಮ ಬಗ್ಗೆ ಎಲ್ಲ ಮಾಹಿತಿಗಳೂ ನಮಗೆ ಲಭಿಸುತ್ತಿವೆ ’ಎಂದು ನಸುಕಿನ 1:37ಕ್ಕೆ isiskashmir@yahoo.com‘ ನಿಂದ ಬಂದಿರುವ ಇ-ಮೇಲ್‌ನಲ್ಲಿ ಹೇಳಲಾಗಿದೆ. ಈ ಬಗ್ಗೆ ತನಿಖೆಯನ್ನು ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಗಂಭೀರ್ ಅವರಿಗೆ ಮಂಗಳವಾರ ಮತ್ತು ಬುಧವಾರವೂ ಜೀವ ಬೆದರಿಕೆಗಳು ಬಂದಿದ್ದವು.

ಸಂಸದರಿಗೆ ಮೊದಲ ಜೀವ ಬೆದರಿಕೆ ಮಂಗಳವಾರ ರಾತ್ರಿ 9:32ಕ್ಕೆ ಅವರ ಅಧಿಕೃತ ಇ-ಮೇಲ್ ಐಡಿಗೆ ಬಂದಿತ್ತು. ಐಸಿಸ್ ಕಾಶ್ಮೀರದಿಂದ ಬಂದಿದ್ದ ಇ-ಮೇಲ್‌ನಲ್ಲಿ ‘ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಕೊಲ್ಲುತ್ತೇವೆ’ಎಂದು ಬೆದರಿಕೆಯೊಡ್ಡಲಾಗಿತ್ತು ಎಂದು ಗಂಭೀರ್ ಅವರ ಆಪ್ತ ಕಾರ್ಯದರ್ಶಿ ಗೌರವ ಅರೋರಾ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.

‘ದೂರು ಸ್ವೀಕರಿಸಿದ ಬಳಿಕ ಜಿಲ್ಲಾ ಪೊಲೀಸರು ಗಂಭೀರ್ ಮತ್ತು ರಾಜಿಂದರ್ ನಗರ ಪ್ರದೇಶದಲ್ಲಿಯ ಅವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇ-ಮೇಲ್‌ಗಳ ಮೂಲಗಳ ಕುರಿತು ನಾವು ತನಿಖೆಯನ್ನು ನಡೆಸುತ್ತಿದ್ದೇವೆ ’ಎಂದು ಡಿಸಿಪಿ ಶ್ವೇತಾ ಚೌಹಾಣ ತಿಳಿಸಿದ್ದರು.

ಬುಧವಾರ ಅಪರಾಹ್ನ 2:32ಕ್ಕೆ ಅದೇ ಇ-ಮೇಲ್ ಐಡಿಯಿಂದ ಬಂದಿದ್ದ ಎರಡನೇ ಜೀವ ಬೆದರಿಕೆಯ ಬಗ್ಗೆ ದೂರವಾಣಿ ಕರೆಯ ಮೂಲಕ ಡಿಸಿಪಿ ಮಾಹಿತಿಯನ್ನು ಸ್ವೀಕರಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಎರಡನೇ ಇ-ಮೇಲ್ ಜೊತೆ ಗಂಭೀರ್ ನಿವಾಸದ ವೀಡಿಯೊವನ್ನು ಲಗತ್ತಿಸಲಾಗಿತ್ತು ಎಂದು ದೂರುದಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News