ಜಾಗತಿಕ ಪ್ರಜಾತಾಂತ್ರಿಕ ರಾಷ್ಟ್ರಗಳ ಸಮಾವೇಶ: ಅಮೆರಿಕದ ನಡೆಗೆ ರಶ್ಯ-ಚೀನಾ ಸಿಡಿಮಿಡಿ

Update: 2021-11-28 17:58 GMT

ವಾಶಿಂಗ್ಟನ್, ನ.28: ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ವರ್ಚುವಲ್ ಸಮಾವೇಶವನ್ನು ಆಯೋಜಿಸುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ನಡೆಯನ್ನು ಚೀನಾ ಹಾಗೂ ರಶ್ಯವು ಕಟುವಾಗಿ ಟೀಕಿಸಿವೆ. ಈ ಸಮಾವೇಶದಲ್ಲಿ ತಮ್ಮನ್ನು ಹೊರಗಿಟ್ಟಿರುವುದು ರಶ್ಯ ಹಾಗೂ ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ.

ಅಮೆರಿಕದಲ್ಲಿನ ಚೀನಾ ಹಾಗೂ ರಶ್ಯದ ರಾಯಭಾರಿಗಳು ಶನಿವಾರ ತೀರಾ ಅಪರೂಪವೆಂಬಂತೆ ಜಂಟಿಯಾಗಿ ಪ್ರಕಟಿಸಿದ ಲೇಖನವೊಂದರಲ್ಲಿ ‘‘ಪ್ರಜಾತಾಂತ್ರಿಕ ರಾಷ್ಟ್ರಗಳ ಸಮಾವೇಶವನ್ನು ನಡೆಸುವ ಅಮೆರಿಕದ ಯೋಜನೆಯು ಅದರ ಶೀತಲ ಸಮರದ ಮನಸ್ಥಿತಿಯ ಉತ್ಪನ್ನವೆಂಬುದು ಸ್ಪಷ್ಟವಾಗುತ್ತದೆ’’ ಎಂದು ರಶ್ಯದ ರಾಯಭಾರಿ ಆನಾತೊಲಿ ಆ್ಯಂಟೊನೊವ್ ಹಾಗೂ ಚೀನಾದ ರಾಯಭಾರಿ ಕ್ವಿನ್ ಗಾಂಗ್ ತಿಳಿಸಿದ್ದಾರೆ. ಡಿಸೆಂಬರ್ 9 ಹಾಗೂ 10ರಂದು ನಡೆಯಲಿರುವ ಈ ಸಭೆಯು ‘‘ ಸೈದ್ಧಾಂತಿಕ ಸಂಘರ್ಷಗಳನ್ನು ಬಡಿದೆಬ್ಬಿಸಲಿದೆ ಹಾಗೂ ವಿಭಜನೆಯ ಹೊಸ ರೇಖೆಗಳನ್ನು ಸೃಷ್ಟಿಸುವ ಮೂಲಕ ಜಗತ್ತಿನಲ್ಲಿ ಒಡಕನ್ನು ಮೂಡಿಸಲಿದೆ’’ ಎಂದು ನ್ಯಾಶನಲ್ ಜರ್ನಲ್ ಪತ್ರಿಕೆಯ ವೆಬ್‌ಸೈಟ್ ಆವೃತ್ತಿಗೆ ಬರೆದ ಲೇಖನದಲ್ಲಿ ಟೀಕಿಸಿದ್ದಾರೆ.

ಜಗತ್ತಿನ ವಿವಿಧೆಡೆ ಸರ್ವಾಧಿಕಾರಿ ಸರಕಾರಗಳು ತಲೆಯೆತ್ತುತ್ತಿರುವ ಈ ಕಾಲಘಟ್ಟದಲ್ಲಿ ಜಾಗತಿಕ ಪ್ರಜಾಸತ್ತೆಯ ಧ್ಯೇಯವನ್ನು ಮುನ್ನಡೆಸುವ ಕುರಿತಾದ ತನ್ನ ಚುನಾವಣಾ ಭರವಸೆಯನ್ನು ಈಡೇರಿಸುವ ಯತ್ನದ ಭಾಗವಾಗಿ ಬೈಡೆನ್ ಈ ಸಮಾವೇಶವನ್ನು ಆಯೋಜಿಸಿದ್ದಾರೆ.

ಭಾರತ, ಪಾಕಿಸ್ತಾನ ಸೇರಿದಂತೆ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿರುವ 110 ರಾಷ್ಟ್ರಗಳ ಪಟ್ಟಿಯನ್ನು ಅಮೆರಿಕ ಮಂಗಳವಾರ ಪ್ರಕಟಿಸಿತ್ತು. ತೈವಾನ್‌ಗೂ ಆಹ್ವಾನ ನೀಡಿರುವುದು ಚೀನಾದ ಇರಿಸುಮುರಿಸಿಗೆ ಕಾರಣವಾಗಿದೆ. ತೈವಾನ್ ತನ್ನ ಭೂಪ್ರದೇಶವೆಂದು ಚೀನಾವು ಪ್ರತಿಪಾದಿಸುತ್ತಲೇ ಬಂದಿದೆ.

‘‘ಜಗತ್ತಿನ ವಿಶಾಲ ಹಾಗೂ ವೈವಿಧ್ಯಮಯ ರಾಜಕೀಯ ‘ಭೂದೃಶ್ಯ’ವನ್ನು ಒಂದೇ ಮಾನದಂಡದಿಂದ ಅಳೆಯುವ ಹಕ್ಕು ಯಾವುದೇ ದೇಶಕ್ಕೂ ಇಲ್ಲ’’ ಎಂದು ಉಭಯದೇಶಗಳ ರಾಯಭಾರಿಗಳು ಹೇಳಿದ್ದಾರೆ. ಚೀನಾದಲ್ಲಿ ಪ್ರಜಾತಂತ್ರದ ಸಮಗ್ರ ಪ್ರಕ್ರಿಯೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಸಾಬೀತಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News