ವಾಯುಮಾಲಿನ್ಯ ನಿಯಂತ್ರಿಸಲು ಸಲಹೆ, ಸೂಚನೆ ಹೊರತಾಗಿಯೂ ಫಲಿತಾಂಶ 'ಶೂನ್ಯ': ಸುಪ್ರೀಂ ಕೋರ್ಟ್ ಅಸಮಾಧಾನ

Update: 2021-11-29 08:08 GMT

ಹೊಸದಿಲ್ಲಿ: ದಿಲ್ಲಿಯ ವಾಯುಮಾಲಿನ್ಯ ನಿಯಂತ್ರಣ ಉದ್ದೇಶದಿಂದ ನೀಡಲಾದ ಎಲ್ಲಾ ಸಲಹೆ ಸೂಚನೆಗಳ ಹೊರತಾಗಿಯೂ ವಾಸ್ತವ ಫಲಿತಾಂಶ 'ಶೂನ್ಯ' ಆಗಿದೆ, ಎಂದು ಸುಪ್ರೀಂ ಕೋರ್ಟ್ ಇಂದು ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಸೂಚನೆಗಳನ್ನು ರಾಜ್ಯ ಸರಕಾರಗಳು ಪಾಲಿಸದೇ ಇದ್ದಲ್ಲಿ ನ್ಯಾಯಾಲಯವೇ ಕಾರ್ಯಪಡೆಯನ್ನು ರಚಿಸಬೇಕಾಗುತ್ತದ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಾಧಿಕಾರ ಈ ಹಿಂದೆ ನೀಡಿದ ಸೂಚನೆಗಳ ಪಾಲನೆಗೆ ಕೈಗೊಂಡ ಕ್ರಮಗಳ ಕುರಿತು ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಇಂದು ದಿಲ್ಲಿ, ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶ ಸರಕಾರಗಳಿಗೆ ಸೂಚಿಸಿದೆ.

ಸೆಂಟ್ರಲ್ ವಿಸ್ತಾ ಯೋಜನೆಯ ನಿರ್ಮಾಣ ಕಾಮಗಾರಿ ಮುಂದುವರಿಸುವುದು ಕೂಡ ಮಾಲಿನ್ಯಕ್ಕೆ ಕಾರಣವಾಗುತ್ತದೆಯೇ ಎಂದು ತಾನು ಕೇಂದ್ರವನ್ನು ಕೇಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಯೋಜನೆಯಿಂದ ಉಂಟಾಗುವ ವಾಯುಮಾಲಿನ್ಯ ನಿಯಂತ್ರಣಕ್ಕೆ ಸರಕಾರ ಯಾವ ಕ್ರಮಕೈಗೊಂಡಿದೆ ಎಂದು ವಿವರಿಸಿ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ನಿಗದಿಪಡಿಸಲಾಗಿದೆ.

ಗಂಭೀರ ಮಟ್ಟ ತಲುಪಿದ್ದ ವಾಯುಮಾಲಿನ್ಯದಿಂದ ಎರಡು ವಾರಗಳ ಕಾಲ ಮುಚ್ಚಿದ್ದ ದಿಲ್ಲಿಯ ಶಾಲೆಗಳು ಸೋಮವಾರ ಪುನರಾರಂಭಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News