ತಲಪಾಡಿ ಗಡಿಯಲ್ಲಿ ಮತ್ತೆ ಕೋವಿಡ್ ಟೆಸ್ಟಿಂಗ್ ಆರಂಭ: ಜಿಲ್ಲಾ ವೈದ್ಯಾಧಿಕಾರಿ ಡಾ.ಕಿಶೋರ್ ಕುಮಾರ್‌

Update: 2021-11-29 09:23 GMT
ತಲಪಾಡಿ ಗಡಿಯಲ್ಲಿ ಆರ್ ಟಿ ಪಿಸಿಆರ್ ವರದಿ ತಪಾಸಣೆ 

ಮಂಗಳೂರು, ನ. 29: ಕೋವಿಡ್ 3ನೆ ಅಲೆಯನ್ನು ನಿಯಂತ್ರಿಸುವ ಸಲುವಾಗಿ ದ.ಕ. ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಇಂದಿನಿಂದ ತಲಪಾಡಿ ಗಡಿಯಲ್ಲಿ ಮೂರು ಪಾಳಿಯಲ್ಲಿ ಕೋವಿಡ್ ತಪಾಸಣೆಯನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಈ ವ್ಯವಸ್ಥೆ ಗಡಿಯಲ್ಲಿ ಇದ್ದು, ಕೋವಿಡ್ ಎರಡನೆ ಅಲೆಯ ಅನ್‌ಲಾಕ್ ಬಳಿಕ ಕೇವಲ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಆಧಾರದಲ್ಲಿ ಕೇರಳದಿಂದ ದ.ಕ. ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಇದೀಗ ಮತ್ತೆ ಇಂದಿನಿಂದ ಕೋವಿಡ್ ತಪಾಸಣೆಯನ್ನು ಆರಂಭಿಸಲಾಗಿದೆ ಎಂದರು.

ಇದಲ್ಲದೆ ನ. 12ರ ಬಳಿಕ ಜಿಲ್ಲೆಯ ವಿವಿಧ ಮೆಡಿಕಲ್, ಪ್ಯಾರಾ ಮೆಡಿಕಲ್ ಸೇರಿದಂತೆ ಕಾಲೇಜು ಹಾಸ್ಟೆಲ್‌ಗಳಿಗೆ ಆಗಮಿಸಿರುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಪ್ರತಿನಿತ್ಯ ಕೇರಳದಿಂದ ಜಿಲ್ಲೆಗೆ ಸಂಚರಿಸುವವರೂ 16 ದಿನಗಳಿಗೊಮ್ಮೆ ಕೋವಿಡ್ ತಪಾಸಣೆ ನಡೆಸಬೇಕು. ವಿಮಾನ ನಿಲ್ದಾಣದಲ್ಲಿಯೂ ಬೇರೆ ರಾಷ್ಟ್ರಗಳಿಂದ ಬರುವರಿಗೆ ನಿಯಮನುಸಾರ ತಪಾಸಣಾ ಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಗಾಬರಿ ಬೇಡ ಕಾಳಜಿ ಇರಲಿ

ಕೋವಿಡ್‌ನ ರೂಪಾಂತರಿತ ತಳಿ ಒಮಿಕ್ರಾನ್ ಬಗ್ಗೆ ಆತಂಕ ಅಗತ್ಯವಿಲ್ಲ. ಹಾಂಕಾಂಗ್, ನೆದರ್‌ಲ್ಯಾಂಡ್ ಸೇರಿದಂತೆ ವಿದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗುತ್ತಿದೆ. ಇದು ಕೋವಿಡ್‌ನ ರೂಪಾಂತರಿತ ತಳಿಯಾದ ಡೆಲ್ಟಾಕ್ಕಿಂತಲೂ ವಿಭಿನ್ನ ಎಂದು ಹೇಳಲಾಗುತ್ತಿದ್ದು, ಕೆಲ ದಿನಗಳ ಹಿಂದೆಯಷ್ಟೇ ಪತ್ತೆಯಾಗಿರುವುದರಿಂದ ಇದರಿಂದ ಆಗುವ ತೊಂದರೆಗಳ ಬಗ್ಗೆ ಇನ್ನಷ್ಟೆ ದಾಖಲೆ, ದೃಢತೆ ಸಿಗಬೇಕಿದೆ. ಹಾಗಿದ್ದರೂ ಇದು ಸೌಮ್ಯ ವೈರಸ್ ಆಗಿದ್ದು, ಹರಡುವಿಕೆಯ ಪ್ರಮಾಣ ಹೆಚ್ಚಿನ ಮಟ್ಟದ್ದು ಎಂದು ಮಾತ್ರವೇ ಹೇಳಲಾಗುತ್ತಿದೆ. ಹಾಗಾಗಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಬಿಟ್ಟು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬದಲಾಗಿ ಕಾಳಜಿ ವಹಿಸಿಕೊಂಡರಷ್ಟೇ ಸಾಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News