ದ.ಕ. ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿನಲ್ಲಿ ಗಣನೀಯ ಇಳಿಕೆ: ಡಾ.ಕಿಶೋರ್ ಕುಮಾರ್

Update: 2021-11-29 09:28 GMT
ಸಾಂದರ್ಭಿಕ ಚಿತ್ರ (PTI)

ಮಂಗಳೂರು, ನ. 29: ದ.ಕ. ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಎಚ್‌ಐವಿ ಸೋಂಕಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, ಈ ವರ್ಷ ಅಕ್ಟೋಬರ್‌ವರೆಗೆ 149 (ಇಬ್ಬರು ಗರ್ಭಿಣಿಯರು ಸೇರಿ) ಜನರಿಗೆ ಎಚ್‌ಐವಿ ಸೋಂಕು ದೃಢಪಟ್ಟಿದೆ ಎಂದು ದ.ಕ. ಜಿಲ್ಲಾ ವೈದ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಡಿಸೆಂಬರ್ 1ರ ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆಯ ಕುರಿತಂತೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದ.ಕ. ಜಿಲ್ಲೆಯಲ್ಲಿ 2007-08ರಿಂದ ಈವರೆಗೆ ಒಟ್ಟು 10,14,925 ಮಂದಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, 10,109 (346 ಗರ್ಭಿಣಿಯರು ಸೇರಿ) ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದರು.

ಎಚ್‌ಐವಿ ಸೋಂಕಿನ ಬಗ್ಗೆ ಸರಿಯಾದ ಮಾಹಿತಿಯ ಕೊರತೆ, ಲೈಂಗಿಕ ವಿಚಾರಗಳ ಬಗ್ಗೆ ಗೌಪ್ಯತಾ ಮನೋಭಾವ ಹೊಂದಿರುವುದು, ಸಹವರ್ತಿಗಳ ಒತ್ತಡ, ಅಪಾಯಕಾರಿ ನಡವಳಿಕೆ, ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ವಾತಾವರಣ, ಲೈಂಗಿಕ ಶೋಷಣೆ ಎಚ್‌ಐವಿ ಸೋಂಕಿಗೆ ಕಾರಣವಾಗಿವೆ ಎಂದರು.

ದ.ಕ. ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ 20 ಆಪ್ತ ಸಮಾಲೋಚನೆ ಮತ್ತು ಪರೀಕ್ಷೆ ಕೇಂದ್ರಗಳು (ಐಸಿಟಿಸಿ) ಕಾರ್ಯಾಚರಿಸುತ್ತಿವೆ. ಅದಲ್ಲದೆ ಲೈಂಗಿಕ ಕಾಯಿಲೆಗಳ ಚಿಕಿತ್ಸಾಲಯ (ಡಿ.ಎಸ್.ಆರ್.ಸಿ.), ರಾಜ್ಯ ರಕ್ತ ಸಂಶೋಧನಾ ಲ್ಯಾಬೊರೇಟರಿ ಕೂಡಾ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಅವರು ಹೇಳಿದರು.

ಎಚ್‌ಐವಿ/ ಏಡ್ಸ್‌ಗೆ ಯಾವುದೇ ಲಸಿಕೆ, ಚಿಕಿತ್ಸೆ ಲಭ್ಯ ಇಲ್ಲವಾದರೂ ಸೋಂಕಿತರು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಹೆಚ್ಚು ವರ್ಷ ಬದುಕಲು ಎಆರ್‌ಟಿ ಚಿಕಿತ್ಸೆ ಲಭ್ಯವಿದೆ. ಇದು ಎಚ್‌ಐವಿ ವೈರಸ್‌ನ ಬೆಳವಣಿಗೆ ಕುಂಠಿತಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ವ್ಯಕ್ತಿಯ ಜೀವನದ ಗುಣಮಟ್ಟ ಹೆಚ್ಚಿಸುತ್ತದೆ. ಆದ್ದರಿಂದ ಸೋಂಕಿತರು ಎಆರ್‌ಟಿ ಚಿಕಿತ್ಸೆ ಪಡೆದುಕೊಂಡು ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಬದ್ರುದ್ದೀನ್ ಹಾಗೂ ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News