ಮಣಿಪಾಲ ಯೂನಿವರ್ಸಲ್ ಪ್ರೆಸ್‌ನ ಎರಡು ಕೃತಿಗಳು ಲೋಕಾರ್ಪಣೆ

Update: 2021-11-29 14:35 GMT

ಉಡುಪಿ, ನ.29: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಸಂಸ್ಥೆಯ ಪ್ರಸಾರಾಂಗ ವಿಭಾಗವಾದ ಮಣಿಪಾಲ ಯುನಿವರ್ಸಲ್ ಪ್ರೆಸ್ ಹೊಸದಾಗಿ ಪ್ರಕಟಿಸಿದ ಎರಡು ಕನ್ನಡ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.

ಪ್ರೊ.ಪಿ.ಆರ್.ಪಂಚಮುಖಿ ಅವರ ‘ಸಾಮಾಜಿಕ ಸಮನ್ವಯದ ಹರಿಕಾರ ಕನಕದಾಸರು’ ಮತ್ತು ಪ್ರೊ.ಎನ್.ಟಿ.ಭಟ್ ಅವರ ‘ಭಾಷಾಂತರ: ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ’ ಕೃತಿಗಳನ್ನು ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ. ವೆಂಕಟೇಶ್ ಮತ್ತು ಮಾಹೆಯ ಕಾರ್ಯಕಾರಿ ಉಪಾಧ್ಯಕ್ಷ ಡಾ.ಎಚ್. ವಿನೋದ್ ಭಟ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ಮಣಿಪಾಲ್ ಯುನಿವರ್ಸಲ್ ಪ್ರೆಸ್ ಸಂಸ್ಥೆ ಹತ್ತು ವರ್ಷಗಳನ್ನು ಪೂರೈಸುತಿದ್ದು, ಅವಧಿಯಲ್ಲಿ ಹಲವು ಪ್ರಮುಖ, ಮಹತ್ವದ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಜ್ಞಾನ ಮತ್ತು ಮಾಹಿತಿಗಳನ್ನು ಸಂಗ್ರಹಿಸುವ ಹಾಗೂ ವಿತರಿಸುವ ಕೆಲಸವನ್ನು ಮಾಡಿದೆ. ಶೈಕ್ಷಣಿಕ, ವೈಜ್ಞಾನಿಕ, ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಹಾಗೂ ತುಳು ಭಾಷೆಗಳಲ್ಲಿ ಇನ್ನೂರಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದೆ. ಪ್ರಕಟಣೆಯನ್ನು ಅನ್ಯ ಭಾರತೀಯ ಭಾಷೆಗಳಿಗೂ ವಿಸ್ತರಿಸುವ ಯೋಚನೆ ಇದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಂಯುಪಿಯ ಪ್ರಧಾನ ಸಂಪಾದಕಿ ಪ್ರೊ. ನೀತಾ ಇನಾಂದಾರ್ ಅವರು, ಹತ್ತು ವರ್ಷಗಳ ಹಿಂದೆ ಇದೇ ದಿನ ಮಣಿಪಾಲ ಯೂನಿವರ್ಸಲ್ ಪ್ರೆಸ್‌ನ ಮಹತ್ವಾಕಾಂಕ್ಷೆ ಮೊದಲ ಕೃತಿ ‘ದ ಪಾಥ್ ಆಫ್ ಪ್ರೂಪ್ಸ್’ ಲೋಕಾರ್ಪಣೆ ಗೊಂಡಿತ್ತು ಎಂದು ನೆನಪಿಸಿಕೊಂಡು, ಇದೀಗ ಪ್ರಕಟಣೆಗೊಂಡಿರುವ ಎರಡು ಕೃತಿಗಳೊಂದಿಗೆ 217 ಪುಸ್ತಕಗಳನ್ನು ಪ್ರಕಟಿಸಲಾ ಗಿದೆ ಎಂದರು.

ಸಭಾ ಕಾರ್ಯಕ್ರಮದ ಬಳಿಕ ಪುಸ್ತಕಗಳ ಕುರಿತು ಸಂವಾದಗೋಷ್ಠಿ ನಡೆಯಿತು. ಲೇಖಕರಾದ ಎನ್.ಟಿ.ಭಟ್, ಸಂಪನ್ಮೂಲ ವ್ಯಕ್ತಿ ಪ್ರೊ.ಪಾದೇಕಲ್ಲು ವಿಷ್ಣು ಭಟ್, ಪ್ರೊ.ಪಾರ್ವತಿ ಜಿ.ಐತಾಳ್ ಗೋಷ್ಠಿಯಲ್ಲಿ ಪಾಲ್ಗೊಂಡರು. ಪೃಥ್ವೀರಾಜ್ ಕವತ್ತಾರ್ ಸಂವಾದ ನಡೆಸಿಕೊಟ್ಟರು.

ಕನಕಜಯಂತಿ ಪ್ರಯುಕ್ತ ಕನಕದಾಸರ ಜೀವನದ ಕುರಿತ ಪ್ರಹಸನದ ಓದನ್ನು ರೇವತಿ ನಾಡಗೀರ್ ಹಾಗೂ ಮಹೇಶ್ ಮಲ್ಪೆ ಪ್ರಸ್ತುತ ಪಡಿಸಿದರು. ಡಾ.ಶ್ರೀನಿವಾಸ ಎನ್.ಆಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News