ದಕ್ಷಿಣ ಆಫ್ರಿಕಾದ ಪ್ರಯಾಣಿಕರ ಮೇಲಿನ ನಿಷೇಧಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಟೀಕೆ

Update: 2021-11-29 16:26 GMT
photo:twitter/@WHO

ಜಿನೆವಾ, ನ.29: ಕೊರೋನ ಸೋಂಕಿನ ಹೊಸ ಪ್ರಬೇಧ ಒಮಿಕ್ರಾನ್ ನಿಯಂತ್ರಣದ ಕಾರಣ ನೀಡಿ ಹಲವು ದೇಶಗಳು ಪ್ರಯಾಣ ನಿರ್ಬಂಧ ಜಾರಿಗೊಳಿಸಿರುವುದನ್ನು ವಿಶ್ವಸಂಸ್ಥೆ ಟೀಕಿಸಿದ್ದು, ಗಡಿಯನ್ನು ಮುಚ್ಚದಂತೆ ಕರೆನೀಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಬಿ.1.1.529 ಪ್ರಬೇಧವನ್ನು ಆತಂಕಕಾರಿ ಸೋಂಕಿನ ಪಟ್ಟಿಗೆ ಸೇರಿಸಿದ್ದರೂ, ಇದು ಇತರ ಪ್ರಬೇಧಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆಯೇ ಅಥವಾ ಅತ್ಯಂತ ಮಾರಕ ಕಾಯಿಲೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಪ್ರಯಾಣ ನಿರ್ಬಂಧದಿಂದ ಕೊರೋನ ಸೋಂಕಿನ ಹರಡುವಿಕೆಯ ಪ್ರಮಾಣ ತುಸು ಕಡಿಮೆಯಾದರೂ, ಜನಜೀವನ ಮತ್ತು ಜೀವನೋಪಾಯದ ಮೇಲೆ ಭಾರೀ ಹೊರೆಬೀಳುತ್ತದೆ . ನಿರ್ಬಂಧ ಜಾರಿಗೊಳಿಸಿದರೂ ಅನಗತ್ಯವಾಗಿ ಗೊಂದಲಕ್ಕೆ ಆಸ್ಪದ ನೀಡದಂತಿರಬೇಕು ಮತ್ತು 190ಕ್ಕೂ ಅಧಿಕ ದೆಶಗಳು ಮಾನ್ಯತೆ ನೀಡಿರುವ ಅಂತರಾಷ್ಟ್ರೀಯ ಆರೋಗ್ಯ ನಿಯಮಗಳಿಗೆ ಅನುಸಾರವಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಒಮ್ರಿಕಾನ್ ಪ್ರಬೇಧದ ಬಗ್ಗೆ ವಿಶ್ವಕ್ಕೆ ಅತ್ಯಂತ ಕ್ಷಿಪ್ರವಾಗಿ ಹಾಗೂ ಪಾರದರ್ಶಕ ರೀತಿಯಲ್ಲಿ ಮಾಹಿತಿ ನೀಡಿದ ದಕ್ಷಿಣ ಆಫ್ರಿಕಾ ಮತ್ತು ಬೊಟ್ಸ್ವಾನಾ ದೇಶಗಳು ಶ್ಲಾಘನೆಗೆ ಅರ್ಹವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ವಲಯದ ಪ್ರಾದೇಶಿಕ ನಿರ್ದೇಶಕ ಮತ್ಶಿಡಿಸೊ ಮೊಯೆತಿ ಹೇಳಿದ್ದಾರೆ. ಜೀವ ಉಳಿಸುವ ಆರೋಗ್ಯ ಮಾಹಿತಿಯನ್ನು ಹಂಚಿಕೊಳ್ಳುವ ಮತ್ತು ಕೋವಿಡ್ ಸೋಂಕು ಹರಡುವುದರಿಂದ ವಿಶ್ವವನ್ನು ರಕ್ಷಿಸುವಲ್ಲಿ ಧೈರ್ಯ ತೋರಿದ ದಕ್ಷಿಣ ಆಫ್ರಿಕಾ ದೇಶಗಳ ಜತೆಗೆ ವಿಶ್ವ ಆರೋಗ್ಯ ಸಂಸ್ಥೆ ನಿಲ್ಲಲಿದೆ. ತಮ್ಮಲ್ಲಿರುವ ಅಂಕಿ ಅಂಶವನ್ನು ಮುಕ್ತವಾಗಿ ಹಂಚಿಕೊಳ್ಳುವ ದೇಶಗಳಿಗೆ ನೆರವಾಗಬೇಕು. ಆದ ಮಾತ್ರ ಮಹತ್ವದ ಅಂಕಿಅಂಶವನ್ನು ಸಕಾಲದಲ್ಲಿ ಪಡೆಯಬಹುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News