ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ; ಸರಕಾರದ ಕೋವಿಡ್ ನಿಮಯ ಮೀರಿ ಆಚರಣೆ ಇಲ್ಲ: ರಘುಪತಿ ಭಟ್

Update: 2021-11-29 16:32 GMT

ಉಡುಪಿ, ನ.29: ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಕೋವಿಡ್ ಸಂಬಂಧ ಸರಕಾರ ಆ ಸಂದರ್ಭದಲ್ಲಿ ಹೊರಡಿಸುವ ಆದೇಶವನ್ನು ಪಾಲನೆ ಮಾಡಲಾಗುವುದು ಎಂದು ಪರ್ಯಾಯೋತ್ಸವ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿ ರಥಬೀದಿಯ ಶ್ರೀಕೃಷ್ಣ ಸಭಾಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆಯಿಂದ ಪರ್ಯಾಯ ಮಹೋತ್ಸವಕ್ಕೆ ಯಾವುದೇ ತೊಂದರೆ ಆಗಲ್ಲ ಎಂಬ ವಿಶ್ವಾಸ ಇದೆ. ಎಲ್ಲ ರೀತಿಯ ಸಿದ್ಧತೆ ನಡೆಸಿದರೂ ಕೋವಿಡ್ ಸಂಬಂಧ ಸರಕಾರ ನಿಯಮವನ್ನು ಮೀರಿ ಪರ್ಯಾಯ ಮಹೋತ್ಸವ ಮಾಡುವುದಿಲ್ಲ ಎಂದು ಸ್ವಾಮೀಜಿ ಈಗಾಗಲೇ ಹೇಳಿದ್ದಾರೆ ಎಂದರು.

30ಕೋಟಿ ಅನುದಾನ ಬೇಡಿಕೆ

ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ನಗರಸಭೆಗೆ 30ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದ್ದು, ಚುನಾವಣೆ ಮುಗಿದ ಬಳಿಕ ಅನುದಾನ ಬಿಡುಗಡೆಯಾಗುವ ವಿಶ್ವಾಸ ಇದೆ ಎಂದು ರಘುಪತಿ ಭಟ್ ಹೇಳಿದರು.

ಈ ಬಾರಿಯ ಪರ್ಯಾಯ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾ ತಂಡಗಳನ್ನು ಕಳುಹಿಸಿಕೊಡಲು ಸಚಿವ ಸುನೀಲ್ ಕುಮಾರ್ ಒಪ್ಪಿಕೊಂಡಿದ್ದಾರೆ. ಪರ್ಯಾಯ ಮಹೋತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆ ಮುಗಿದ ಬಳಿಕ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.

ಹೆಚ್ಚುವರಿ ಪೌರಕಾರ್ಮಿಕರು

ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಮೂರು ಕೋಟಿ ಹಾಗೂ ಪ್ರಮುಖ ರಸ್ತೆಗಳ ಅಭಿವೃದ್ಧಿ ನಾಲ್ಕು ಒಟ್ಟು ಏಳು ಕೋಟಿ ರೂ. ಮೊತ್ತದ ಕಾಮಗಾರಿ ನಡೆಸಲು ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ. ಈ ಬಾರಿ ಸ್ವಚ್ಛತೆಗಾಗಿ ನಗರಸಭೆಯಿಂದ 75 ಮಂದಿ ಹೆಚ್ಚುವರಿ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಕೊಳ್ಳಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರ್ಯಾಯೋತ್ಸವ ಸ್ವಾಗತ ಸಮಿತಿ ಗೌರವಾಧ್ಯಕ್ಷ ಸೂರ್ಯನಾರಾಯಣ ಉಪಾಧ್ಯಾಯ, ಸಂಯೋಜಕ ಶ್ರೀಶ ಆಚಾರ್, ಕೋಶಾಧಿಕಾರಿ ರವಿ ಪ್ರಸಾದ್, ಬಿ.ವಿ.ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯ ದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ವಂದಿಸಿದರು.

ಡಿ.8ರಂದು ಭತ್ತ ಮೂಹೂರ್ತ 
ಪರ್ಯಾಯದ ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಕೊನೆಯದಾದ ಭತ್ತ ಮುಹೂರ್ತವು ಡಿ.8ರಂದು ನಡೆಯಲಿದೆ ಎಂದು ಪರ್ಯಾಯೋತ್ಸವ ಸ್ವಾಗತ ಸಮಿತಿ ಗೌರವಾಧ್ಯಕ್ಷ ಸೂರ್ಯನಾರಾಯಣ ಉಪಾಧ್ಯಾಯ ತಿಳಿಸಿದರು.

ಬೆಳಗ್ಗೆ 7.10ಕ್ಕೆ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ, ಚಿನ್ನದ ಪಾಲಕಿಯಲ್ಲಿ ಸಿಂಗರಿಸಿದ ಭತ್ತದ ಮುಡಿಯನ್ನಿಟ್ಟು ರಥಬೀದಿಯಲ್ಲಿ ಮೆರವಣಿಗೆಯಲ್ಲಿ ತಂದು ಪಯಾರ್ಯ ಶ್ರೀಕೃಷ್ಣ ಮಠದ ಬಡಗು ಮಾಳಿಗೆಲ್ಲಿ ಬೆಳಗ್ಗೆ 8.22ಕ್ಕೆ ಭತ್ತ ಮೂಹೂರ್ತ ನೆರವೇರಿಸಲಾಗುವುದು. ಈ ಮೂಹೂರ್ತ ದಲ್ಲಿ ಕಟ್ಟಿಗೆ ರಥಕ್ಕೆ ಶಿಖರವನ್ನಿಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News