ಹೂಡೆಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ದಾಳಿ: ದುಷ್ಕರ್ಮಿಗಳಿಂದ ಪೊಲೀಸರ ಮೇಲೆ ಕಲ್ಲು ತೂರಾಟ

Update: 2021-11-29 16:48 GMT

ಮಲ್ಪೆ, ನ.29: ಅಕ್ರಮ ಮರಳು ಸಾಗಾಟ ಸಂಬಂಧಿಸಿ ಕ್ರಮಕ್ಕೆ ಮುಂದಾದ ಮಲ್ಪೆ ಎಸ್ಸೈ ಸೇರಿದಂತೆ ಪೊಲೀಸರ ಮೇಲೆ ದುಷ್ಕರ್ಮಿಗಳು ನ.28ರಂದು ರಾತ್ರಿ ವೇಳೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಎಸ್ಸೈ ಖಾಸಗಿ ವಾಹನ ಜಖಂಗೊಂಡಿರುವ ಬಗ್ಗೆ ವರದಿಯಾಗಿದೆ.

ಹೂಡೆಯ ಖದೀಮಿ ಜಾಮೀಯಾ ಮಸೀದಿಯ ಬಳಿ ಇರ್ಷಾದ್ ಎಂಬಾತ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಮಲ್ಪೆ ಎಸ್ಸೈ ಸಕ್ತಿವೇಲು ಹಾಗೂ ಸಿಬ್ಬಂದಿ ರಾತ್ರಿ 11:15 ಗಂಟೆ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಸೇರಿದ್ದ ಸುಮಾರು 10 ರಿಂದ 12 ಮಂದಿಯ ಗುಂಪು ಎಸ್ಸೈ ಮತ್ತು ಸಿಬ್ಬಂದಿಯವರ ಕಡೆಗೆ ಕಲ್ಲುಗಳನ್ನು ತೂರಿದರೆಂದು ದೂರಲಾಗಿದೆ.

ಇದರ ಪರಿಣಾಮ ಎಸ್ಸೈಯ ಖಾಸಗಿ ವಾಹನದ ಮೇಲೆ ಕಲ್ಲುಗಳು ಬಿದ್ದು ಜಖಂಗೊಂಡು ಹಾನಿಯಾಗಿದೆನ್ನಲಾಗಿದೆ. ಈ ಗುಂಪಿನಲ್ಲಿ ಇದಾಯತ್, ಅಹಾದ್, ಅಲ್ಫಾಜ್, ಶಾಹಿಲ್, ಇರ್ಫಾನ್, ಇರ್ಷಾದ್ ಹಾಗೂ ಇತರ 3-4 ಮಂದಿ ಇದ್ದು, ಇವರೆಲ್ಲರು ಅಲ್ಲಿಂದ ಓಡಿ ಹೋದರು. ನಂತರ ರಾತ್ರಿ 12:45ಕ್ಕೆ ಹೂಡೆ ಉರ್ದು ಶಾಲೆಯ ಹತ್ತಿರ ಗಸ್ತು ಮಾಡುತ್ತಿರುವಾಗ ಮತ್ತೆ ವಾಹನದ ಮೇಲೆ ಹಾಗೂ ಗಸ್ತು ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ಮಾಡಿದ್ದರೆನ್ನಲಾಗಿದೆ.

ಆರೋಪಿಗಳು ಅಕ್ರಮ ಕೂಟ ಸೇರಿ ಕೈಯಲ್ಲಿ ಕಲ್ಲುಗಳನ್ನು ಹಿಡಿದು ಮಲ್ಪೆ ಎಸ್ಸೈ ಹಾಗೂ ಸಿಬ್ಬಂದಿ ಮೇಲೆ ಹಾಗೂ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದಾರೆ ಮತ್ತು ಅಕ್ರಮ ಮರಳು ಗಣಿಗಾರಿಕೆ ನಡೆಸುವ ಸ್ಥಳಕ್ಕೆ ಪರಿಶೀಲನೆಗಾಗಿ ಹೋಗದಂತೆ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅದೇ ರೀತಿ ಎಸ್ಸೈಯ ಖಾಸಗಿ ವಾಹನವನ್ನು ಜಖಂಗೊಳಿಸಿ ಹಾನಿ ಉಂಟು ಮಾಡಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಇದಾಯತ್ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News