ತ್ರಿಪುರಾ ಹಿಂಸಾಚಾರ ಪ್ರಕರಣ: ಕೇಂದ್ರ, ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2021-11-29 18:13 GMT

ಹೊಸದಿಲ್ಲಿ, ನ. 29: ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆ ಹಾಗೂ ಈ ಬಗ್ಗೆ ರಾಜ್ಯ ಪೊಲೀಸರ ನಿಷ್ಕ್ರಿಯತೆ, ಶಾಮಿಲಾಗಿರುವ ಆರೋಪದ ಕುರಿತು ಸ್ವತಂತ್ರ ತನಿಖೆ ಆಗ್ರಹಿಸಿ ನ್ಯಾಯವಾದಿಯೊಬ್ಬರು ಸಲ್ಲಿಸಿದ ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ. ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಎ.ಎಸ್. ಬೋಪಣ್ಣ ಅವರ ಪೀಠ ಈ ಬಗ್ಗೆ ಎರಡು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

ದೂರುದಾರ ಇಹ್ತೆಶಾಮ್ ಹಶ್ಮಿ ಅವರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್, ಇತ್ತೀಚೆಗೆ ನಡೆದ ಕೋಮು ಗಲಭೆ ಹಾಗೂ ಅದರಲ್ಲಿ ಪೊಲೀಸರ ಜಟಿಲತೆಯ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ‘‘ತ್ರಿಪುರಾ ಕೋಮು ಗಲಭೆಗೆ ಸಂಬಂಧಿಸಿದ ಹಲವು ಪ್ರಕರಣಗಳು ನ್ಯಾಯಾಲಯದ ಮುಂದೆ ಇವೆ. ಸತ್ಯ ಶೋಧನೆಗೆ ತೆರಳಿದ್ದ ಕೆಲವು ನ್ಯಾಯವಾದಿಗಳಿಗೆ ನೋಟಿಸು ಜಾರಿ ಮಾಡಲಾಗಿದೆ. ಪತ್ರಕರ್ತರ ವಿರುದ್ಧ ಯುಎಪಿಎ ಆರೋಪ ಹೊರಿಸಲಾಗಿದೆ. ಈ ಗಲಭೆ ಪ್ರಕರಣದಲ್ಲಿ ಪೊಲೀಸರು ಒಂದೇ ಒಂದು ಎಫ್‌ಐಆರ್ ದಾಖಲಿಸಿಲ್ಲ. ಈ ಎಲ್ಲವೂ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಸಮಿತಿ ತನಿಖೆ ನಡೆಸಬೇಕೆಂದು ನಾವು ಬಯಸುತ್ತೇವೆ’’ ಎಂದು ಭೂಷಣ್ ಹೇಳಿದರು.

ಈ ಬಗ್ಗೆ ಪ್ರತಿವಾದಿಗಳಿಗೆ ನೋಟಿಸು ಜಾರಿ ಮಾಡಲಾಗುತ್ತಿದೆ ಹಾಗೂ ಈ ಮನವಿಯನ್ನು ಎರಡು ವಾರಗಳ ಬಳಿಕ ವಿಚಾರಣೆಗೆ ಪರಿಗಣಿಸಲಾಗಿದೆ ಎಂದು ಪೀಠ ಹೇಳಿದೆ. ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಾಗೂ ತ್ರಿಪುರಾ ಸರಕಾರದ ಸ್ಥಾಯಿ ವಕೀಲರಿಗೆ ನೋಟಿಸಿನ ಪ್ರತಿ ಕಳುಹಿಸುವಂತೆ ನಿರ್ದೇಶಿಸಲಾಗಿದೆ ಎಂದು ಪೀಠ ತಿಳಿಸಿತು. ಅಪರಾಧಿಗಳೊಂದಿಗೆ ಪೊಲೀಸರು ಶಾಮೀಲಾಗಿದ್ದರು ಹಾಗೂ ಗಲಭೆಕೋರರು, ಕಿಚ್ಚಿಟ್ಟ ಹಾಗೂ ದಾಂಧಲೆಗೆ ಕಾರಣರಾದ ಒಬ್ಬರೇ ಒಬ್ಬರನ್ನು ಅವರು ಬಂಧಿಸಿಲ್ಲ ಎಂದು ಹಶ್ಮಿ ತನ್ನ ಮನವಿಯಲ್ಲಿ ಹೇಳಿದ್ದಾರೆ.

ಹಿಂಸಾಚಾರ ತಡೆಯುವ ಪ್ರಯತ್ನದ ಬದಲಾಗಿ ಪೊಲೀಸರು ಹಾಗೂ ರಾಜ್ಯ ಸರಕಾರ ತ್ರಿಪುರಾದಲ್ಲಿ ಎಲ್ಲಿ ಕೂಡೂ ಯಾವುದೇ ಕೋಮು ಗಲಭೆ ನಡೆದಿಲ್ಲ ಎಂದು ಪ್ರತಿಪಾದಿಸಿತ್ತು. ಅಲ್ಲದೆ, ಧಾರ್ಮಿಕ ಕಟ್ಟಡಕ್ಕೆ ಬೆಂಕಿ ಹಚ್ಚಿದ ವರದಿಯನ್ನು ನಿರಾಕರಿಸಿತ್ತು ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News