ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗುವ ಎಚ್‌ಐವಿ ಸೋಂಕಿತರಲ್ಲಿ ಶೇ.25 ಹೊರ ಜಿಲ್ಲೆಯವರು: ಡಾ. ಚಿದಾನಂದ

Update: 2021-11-30 14:26 GMT

ಉಡುಪಿ, ನ.30: ಉಡುಪಿ ಜಿಲ್ಲೆಯ ಎರಡು ಎಆರ್‌ಟಿ ಚಿಕಿತ್ಸಾ ಘಟಕದಲ್ಲಿ ಒಟ್ಟು 3826 ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಒಳಪಟ್ಟವರಲ್ಲಿ ಶೇ.25ರಷ್ಟು ಸೋಂಕಿತರು ಹೊರ ಜಿಲ್ಲೆಯವರಾಗಿರು ತ್ತಾರೆ ಎಂದು ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ. ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ನೆ ಸಾಲಿ ನಲ್ಲಿ ಎಚ್‌ಐವಿ ಸೋಂಕಿತ 189 ಮಂದಿಯಲ್ಲಿ 48 ಮತ್ತು 2021ರ ಸೆಪ್ಟಂಬರ್ ವರೆಗೆ ಪತ್ತೆಯಾದ 75 ಮಂದಿ ಸೋಂಕಿತರಲ್ಲಿ 22 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ. ಕಳೆದ ವರ್ಷ ಒಟ್ಟು 77 ಮಂದಿ ಎಚ್‌ಐವಿ ಸೋಂಕಿತರಲ್ಲಿ ಕೊರೋನಾ ಪತ್ತೆಯಾಗಿದ್ದು, ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದರು.

ತಾಯಿಯಿಂದ ಹುಟ್ಟುವ ಮಗುವಿಗೆ ಸೊಂಕು ಹರಡದಂತೆ ಸಾಕಷ್ಟು ಕ್ರಮ ಗಳನ್ನು ತೆಗೆದುಕೊಂಡ ಪರಿಣಾಮ ಕಳೆದ ಐದು (2016ರಿಂದ) ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮಗುವಿನಲ್ಲಿ ಸೋಂಕು ಕಂಡುಬಂದಿಲ್ಲ. ಸೋಂಕಿತ ತಾಯಿಗೆ ಹುಟ್ಟಿದ ಮಗುವಿಗೆ ಆರು ವಾರಗಳ ಕಾಲ ಚಿಕಿತ್ಸೆ ನೀಡಿ, 18 ತಿಂಗಳ ಬಳಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ ನೆಗೆಟಿವ್ ಬಂದರೆ ಮಗು ಸೋಂಕು ಮುಕ್ತ ಎಂಬುದಾಗಿ ಘೋಷಿಸಲಾಗುತ್ತದೆ ಎಂದು ಅವರು ಹೇಳಿದರು.

ಸೋಂಕಿತರ ಸಂಖ್ಯೆ ಇಳಿಕೆ

2021-22(ಅಕ್ಟೋಬರ್‌ವರೆಗೆ)ನೆ ಸಾಲಿನಲ್ಲಿ 32704 ಮಂದಿಯನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸುವ ಗುರಿ ಹೊಂದಿದ್ದು, ಅದರಂತೆ 34154 ಮಂದಿಯನ್ನು ಪರೀಕ್ಷಿಸುವ ಮೂಲಕ ಶೇ.104 ಸಾಧನೆ ಮಾಡಲಾಗಿದೆ. ಇದರಲ್ಲಿ 88(ಶೇ.0.25) ಸೋಂಕು ಪತ್ತೆಯಾಗಿದೆ. 2020-21ನೆ ಸಾಲಿನಲ್ಲಿ ಕೊರೋನಾದಿಂದ 56064 ಗುರಿಯಲ್ಲಿ 44791 ಮಂದಿಯನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಶೇ.80ರಷ್ಟು ಸಾಧನೆ ಮಾಡಲಾಗಿದೆ. ಇದರಲ್ಲಿ 189 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದರು.

ಅದೇ ರೀತಿ 2020-21ನೇ ಸಾಲಿನಲ್ಲಿ 19920 ಗರ್ಭಿಣಿಯರನ್ನು ಪರೀಕ್ಷಿ ಸುವ ಗುರಿ ಹೊಂದಿದ್ದು, ಅದರಲ್ಲಿ 19012 ಮಂದಿಯನ್ನು ಪರೀಕ್ಷೆಗೆ ಒಳಪಡಿ ಸುವ ಮೂಲಕ ಶೇ.95.44 ಸಾಧನೆ ಮಾಡಲಾಗಿದೆ. ಇದರಲ್ಲಿ 14(ಶೇ.0.07) ಮಂದಿಯಲ್ಲಿ ಸೋಂಕು ಕಂಡುಬಂದಿದೆ. 2021-22(ಅಕ್ಟೋಬರ್‌ವರೆಗೆ) ನೇ ಸಾಲಿನಲ್ಲಿ 11620 ಗುರಿಯೊಂದಿಗೆ 11889 ಗರ್ಭಿಣಿಯರನ್ನು ಪರೀಕ್ಷಿಸುವ ಮೂಲಕ ಶೇ.102.31 ಸಾಧನೆ ಮಾಡಲಾಗಿದೆ. ಇದರಲ್ಲಿ 4(ಶೇ.0.03) ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಎಚ್‌ಐವಿ ಪೀಡಿತರಲ್ಲಿ ಈ ವರ್ಷ 42 ಮಂದಿ ಹಾಗೂ ಕಳೆದ ವರ್ಷ 126 ಮಂದಿ ಮರಣ ಹೊಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ರಕ್ತದಾನದಲ್ಲಿ ಗುರಿ ಮೀರಿದ ಸಾಧನೆ

ಉಡುಪಿ ಜಿಲ್ಲೆಯಲ್ಲಿರುವ ಒಟ್ಟು ಮೂರು ರಕ್ತನಿಧಿ ಕೇಂದ್ರಗಳಲ್ಲಿ 2020- 21ರಲ್ಲಿ 15ಸಾವಿರ ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಒಟ್ಟು 22542 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಈ ಮೂಲಕ ಶೇ.150ರಷ್ಟು ಸಾಧನೆ ಮಾಡಲಾಗಿದೆ ಎಂದು ಡಾ.ಚಿದಾನಂದ ಸಂಜು ಎಸ್.ವಿ. ತಿಳಿಸಿದ್ದಾರೆ.

2021-22(ಅಕ್ಟೋಬರ್) ಸಾಲಿನಲ್ಲಿ 8750 ಗುರಿಯೊಂದಿಗೆ 15226 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಈ ಮೂಲಕ ಶೇ.174 ಗುರಿ ಮೀರಿದ ಸಾಧನೆ ಮಾಡಲಾಗಿದೆ. ಈ ವೇಳೆ ಆರು ಮಂದಿಯಲ್ಲಿ ಎಚ್‌ಐವಿ ಪಾಸಿಟಿವ್ ಕಂಡುಬಂದಿದೆ ಎಂದು ಅವರು ತಿಳಿಸಿದರು.

ವಿಶ್ವ ಏಡ್ಸ್ ದಿನಾಚರಣೆ

ಜಿಲ್ಲಾಡಳಿತ, ಜಿಪಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಏಡ್ಸ್ ದಿನ ಜಾಥ ಮತ್ತು ಜಾಗೃತಿ ಕಾರ್ಯಕ್ರಮವನ್ನು ಡಿ.1ರಂದು ಬೆಳಗ್ಗೆ 10ಗಂಟೆಗೆ ಅಂಬಲಪಾಡಿ ಸ್ವಸಹಾಯ ಸಂಘ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಿಪಂ ಮುಖ್ಯಕಾರ್ಯನಿರ್ಹಣಾಧಿಕಾರಿ ಡಾ.ನವೀನ್ ಭಟ್ ವಹಿಸಲಿರುವರು. ಇದಕ್ಕೂ ಮುನ್ನ ನಗರ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಡುವ ಜಾಥಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್. ಚಾಲನೆ ನೀಡಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News