ರಿಹಾನಾಗೆ ‘ನ್ಯಾಷನಲ್ ಹೀರೋ’ ಸ್ಥಾನಮಾನ ನೀಡಿದ ನೂತನ ಗಣತಂತ್ರ ದೇಶ ಬಾರ್ಬಡೋಸ್

Update: 2021-11-30 15:49 GMT
ರಿಹಾನಾ(photo:twitter/@rihanna)

ಬ್ರಿಜ್‌ಟೌನ್, ನ.30: ಬಾರ್ಬಡೋಸ್‌ಗೆ ನೂತನ ಗಣರಾಜ್ಯದ ಸ್ಥಾನಮಾನ ದೊರಕುತ್ತಿದ್ದಂತೆಯೇ, ಆ ದೇಶದ ಪ್ರಧಾನಿ ದ್ವೀಪರಾಷ್ಟ್ರದ ಅತ್ಯಂತ ಜನಪ್ರಿಯ ಪ್ರಜೆ ರಿಹಾನಾರನ್ನು ರಾಷ್ಟ್ರೀಯ ಹೀರೋ ಎಂದು ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಸೃಜನಶೀಲತೆ, ಶಿಸ್ತು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಹುಟ್ಟಿದ ಭೂಮಿಗೆ ಅಸಾಧಾರಣ ಬದ್ಧತೆಯೊಂದಿಗೆ ವಿಶ್ವದ ಒಳಿತಿಗಾಗಿ ಕಾರ್ಯನಿರ್ವಹಿಸಿದ ರಾಷ್ಟ್ರದ ಹೆಮ್ಮೆ ರಿಹಾನಾ ಫೆಂಟಿಗೆ ನ್ಯಾಷನಲ್ ಹೀರೋ ಗೌರವ ಪ್ರದಾನಿಸಲು ಹೆಮ್ಮೆಯೆನಿಸುತ್ತದೆ ಎಂದು ಬಾರ್ಬಡೋಸ್ ಪ್ರಧಾನಿ ಮಿಯಾ ಮೋಟ್ಲಿ ಶ್ಲಾಘಿಸಿದ್ದಾರೆ.

ಹಲವು ಗ್ರಾಮ್ಯಿ ಪುರಸ್ಕಾರ ಪಡೆದಿರುವ ಖ್ಯಾತ ಗಾಯಕಿ ಹಾಗೂ ಉದ್ಯಮಿ ರಿಹಾನಾರಿಗೆ 2018ರಲ್ಲಿ ಬಾರ್ಬಡೋಸ್‌ನ ‘ ಅಸಾಧಾರಣ ಮತ್ತು ಪೂರ್ಣಾಧಿಕಾರದ ರಾಯಭಾರಿ’ ಎಂಬ ಗೌರವವನ್ನು ನೀಡಿ, ದೇಶದಲ್ಲಿ ಶಿಕ್ಷಣ ಮತ್ತು ಪ್ರವಾಸೋದ್ದಿಮೆಗೆ ಪ್ರೋತ್ಸಾಹ ನೀಡುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಗಾಯನದ ಜೊತೆ ಯಶಸ್ವೀ ಉದ್ಯಮಿಯೂ ಆಗಿರುವ ರಿಹಾನಾ, ಶೃಂಗಾರ ಸಾಧನ ಹಾಗೂ ಫ್ಯಾಶನ್‌ಗೆ ಸಂಬಂಧಿಸಿದ ‘ಫೆಂಟಿಬ್ಯೂಟಿ’ ಸಂಸ್ಥೆ ಸ್ಥಾಪಿಸಿದ್ದಾರೆ. ಇವರ ಆದಾಯ 1.7 ಬಿಲಿಯನ್ ಡಾಲರ್ ಎಂದು ಕಳೆದ ಆಗಸ್ಟ್‌ನಲ್ಲಿ ಫೋರ್ಬ್ಸ್ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News