ಡಿ.3: ಭಿನ್ನ ಸಾಮರ್ಥ್ಯದ ಮಕ್ಕಳಿಂದ ಪಥಸಂಚಲ

Update: 2021-11-30 15:55 GMT

ಮಂಗಳೂರು, ನ. 30: ರಾಜ್ಯ ವಿಶೇಷ ಶಿಕ್ಷಕರು ಹಾಗು ಶಿಕ್ಷಕೇತರ ಸಂಘ ಜಿಲ್ಲಾ ಘಟಕದ ಆಶ್ರಯದಲ್ಲಿ ಡಿ.3ರಂದು ಬೆಳಗ್ಗೆ 10 ಗಂಟೆಗೆ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಅರಿವು ಮೂಡಿಸುವ ಪಥಸಂಚಲನ ಹಮ್ಮಿಕೊಳ್ಳಲಾಗಿದೆ.

ಮಲ್ಲಿಕಟ್ಟೆ ಲಯನ್ಸ್ ಕ್ಲಬ್ ಮುಂಭಾಗದಿಂದ ಸೈಂಟ್ ಆಗ್ನೇಸ್ ವಿಶೇಷ ಶಾಲೆಯ ತನಕ ಪಥ ಸಂಚಲನ ನಡೆಯಲಿದೆ. ಜಿಲ್ಲೆಯ 9 ವಿಶೇಷ ಶಾಲೆಗಳ 150ರಿಂದ 200 ಮಂದಿ 18 ವರ್ಷ ಮೀರಿರುವ 2 ಡೋಸ್ ವ್ಯಾಕ್ಸಿನ್ ಪಡೆದಿರುವ ಭಿನ್ನ ಸಾಮರ್ಥ್ಯದ ಮಕ್ಕಳು ಭಾಗವಹಿಸಲಿದ್ದಾರೆ ಎಂದು ರಾಜ್ಯ ಸಂಘದ ಪ್ರ.ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಳಿಕ ಶಾಲೆಯ ಹೊರಾಂಗಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ್ಯಾರಿ ಡಿಸೋಜ ಹಾಗು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಜಿಲ್ಲೆಯ ವಿಶೇಷ ಶಾಲೆಗಳ ಪ್ರತಿಭೆಗಳನ್ನು ಅಭಿನಂಧಿಸಲಾಗುವುದು. ಉದ್ಯಮಿ ಗಣೇಶ್ ಶೆಟ್ಟಿ ಹಾಗು ಕೊಂಚಾಡಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ದೇರೆಬೈಲ್ ಇಲ್ಲಿನ ಮೊಕ್ತೇಸರ ರಮಾನಂದ ಭಂಡಾರಿ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಸಂಘದ ಪದಾಧಿಕಾರಿಗಳಾದ ಸುಮಾ ಡಿಸಿಲ್ವ, ಸುಪ್ರಿತಾ ತನೋಜ್, ಧನಂಜಯ ವರ್ಮ, ರೇಶ್ಮಾ ಸೆರಾವೊ ಉಪಸ್ಥಿತರಿದ್ದರು.

ಸರ್ಕಾರ ಕಡೆಗಣೆ

ಜಿಲ್ಲೆಯಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳ 13 ಶಾಲೆಗಳು ಕಾರ್ಯಾಚರಿಸುತ್ತಿದ್ದು, ಈ ಪೈಕಿ 6 ಶಾಲೆಗಳು ಶಿಶು ಕೇಂದ್ರಗಳಾಗಿವೆ. ವಿಶೇಷ ಶಿಕ್ಷಕರು ಅತ್ಯುತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಆದರೆ ವೇತನ ಅತಿ ಕಡಿಮೆಯಾಗಿದೆ. ಮಕ್ಕಳನ್ನು ನೋಡಿಕೊಳ್ಳುವವರಿಗೂ ಅತಿ ಕಡಿಮೆ ವೇತನ ಇದೆ. ಈ ಬಗ್ಗೆ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಸಂತ ಕುಮಾರ್ ಶೆಟ್ಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News