ಡಿ. 6ರಂದು ಕದ್ರಿ ಗೋಪಾಲನಾಥ ಸ್ಮರಣಾರ್ಥ ‘ಕದ್ರಿ ಸಂಗೀತ ಸೌರಭ’

Update: 2021-11-30 15:55 GMT

ಮಂಗಳೂರು, ನ.30: ಬಂಟ್ವಾಳ ಸಜಿಪದಲ್ಲಿರುವ ಡಾ. ಕದ್ರಿ ಗೋಪಾಲನಾಥ ಮೆಮೋರಿಯಲ್‌ನಲ್ಲಿ ಸ್ಯಾಕ್ಸೋಫೋನ್ ಚಕ್ರವರ್ತಿ, ಪದ್ಮಶ್ರೀ ಪುರಸ್ಕೃತ ಡಾ. ಕದ್ರಿ ಗೋಪಾಲನಾಥ್ ಅವರ ಜನುಮದಿನದ ಅಂಗವಾಗಿ ಕದ್ರಿ ಸಂಗೀತ ಸೌರಭ 2021 ಕಾರ್ಯಕ್ರಮ ಡಿ. 6ರಂದು ಆಯೋಜಿಸಲಾಗಿದೆ.

ಕದ್ರಿ ಗೋಪಾಲನಾಥರ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಡಾ. ಕದ್ರಿ ಗೋಪಾಲನಾಥ ಜೀವಿತಾವಧಿ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ವರ್ಷದ ಪ್ರಶಸ್ತಿಗಾಗಿ ಮೋರ್ಸಿಂಗ್ ವಿದ್ವಾನ್ ಡಾ. ಎಲ್. ಭೀಮಾಚಾರ್ಯ ಮತ್ತು ಗಾಯಕ ಹುಲ್ಯಾಳ ಮಹದೇವಪ್ಪ ಅವರಿಗೆ ನೀಡಲಾಗುತ್ತಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

‘ಕದ್ರಿ ಸಂಗೀತ ಸೌರಭ’ ಕಾರ್ಯಕ್ರಮದಲ್ಲಿ ಸಾದಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಶಾಸಕರಾದ ರಾಜೇಶ್ ನಾಯಕ್, ವೇದವ್ಯಾಸ ಕಾಮತ್, ಖ್ಯಾತ ಸಿನೆಮಾ ನಿರ್ದೇಶಕರಾದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಬಿ.ಎಸ್. ಲಿಂಗದೇವರು, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ದ.ಕ.ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಗಲಿದ ದಿವ್ಯ ಚೇತನ ಪುನೀತ್ ರಾಜ್ ಕುಮಾರ್, ಗೋಪಾಲ ಕೃಷ್ಣ ಐಯ್ಯರ್, ಸಜಿಪ ಗ್ರಾ.ಪಂ. ಅಧ್ಯಕ್ಷ ಸದಾನಂದ ಪೂಂಜ, ಮೃದಂಗ ವಿದ್ವಾನ್ ಸಾಯಿನಾಥ್ ಅವರಿಗೆ ಶ್ರದ್ಧಾಂಜಲಿ, ನುಡಿನಮನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News