ಕೋವಿಡ್ ಲಸಿಕೆ ‘ಒಮೈಕ್ರಾನ್’ ವಿರುದ್ಧ ಕಡಿಮೆ ಪರಿಣಾಮಕಾರಿ: ಮೊಡೆರ್ನ ಸಿಇಒ ಎಚ್ಚರಿಕೆ

Update: 2021-11-30 16:33 GMT
photo:twitter/@moderna_tx

ಹಾಂಗ್‌ಕಾಂಗ್, ನ.30: ಕೊರೋನ ಸೋಂಕಿನ ವಿರುದ್ಧದ ಲಸಿಕೆಗಳು ಡೆಲ್ಟಾ ಪ್ರಬೇಧದ ವಿರುದ್ಧ ಬೀರಿದಷ್ಟು ಪರಿಣಾಮವನ್ನು ಒಮೈಕ್ರಾನ್ ವಿರುದ್ಧ ಬೀರುವ ಸಾಧ್ಯತೆಯಿಲ್ಲ ಎಂದು ಔಷಧ ಉತ್ಪಾದನಾ ಸಂಸ್ಥೆ ಮೊಡೆರ್ನಾ ಹೇಳಿದ್ದು ಈ ಮೂಲಕ ಮತ್ತೊಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

ಡೆಲ್ಟಾ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದ್ದರೂ, ಇದು ಒಮೈಕ್ರಾನ್ ವಿಷಯಕ್ಕೂ ಅನ್ವಯಿಸುತ್ತದೆ ಎಂದು ಹೇಳಲಾಗದು ಎಂದು ಮೊಡೆರ್ನಾದ ಸಿಇಒ ಸ್ಟೀಫನ್ ಬ್ಯಾಂಕೆಲ್ ಹೇಳಿದ್ದು, ನೂತನ ಪ್ರಬೇಧದಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಹೆಚ್ಚಬಹುದು ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ. ಆದರೆ ನಾನು ಭೇಟಿಯಾದ ವಿಜ್ಞಾನಿಗಳೆಲ್ಲಾ ‘ಇದು ಒಳಿತಾಗುವ ವಿಷಯವಲ್ಲ’ ಎಂದು ಹೇಳುತ್ತಿದ್ದಾರೆ. ಇದು ಖಂಡಿತಾ ನಿರುತ್ಸಾಹಗೊಳಿಸುವ ವಿಷಯ. ಇನ್ನಷ್ಟು ಅಂಕಿಅಂಶಕ್ಕೆ ನಾವು ಕಾಯಬೇಕಿದೆ ಎಂದು ಬ್ಯಾಂಕೆಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಮೈಕ್ರಾನ್ ಸೋಂಕು ಉಲ್ಬಣಗೊಳ್ಳುತ್ತಿರುವ ಆತಂಕಕಾರಿ ವರದಿ ಪ್ರಸಾರವಾಗುತ್ತಿದ್ದಂತೆಯೇ ಜಾಗತಿಕ ಶೇರು ಮಾರುಕಟ್ಟೆಯಲ್ಲಿ ಶೇರುಗಳ ದರದಲ್ಲಿ ಭಾರೀ ಕುಸಿತ ಕಂಡುಬಂದಿದ್ದು ಸುಮಾರು 2 ಟ್ರಿಲಿಯನ್ ಡಾಲರ್‌ನಷ್ಟು ನಷ್ಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ಅಮೆರಿಕದಲ್ಲಿ ಲಸಿಕಾಕರಣ ಪ್ರಕ್ರಿಯೆಯನ್ನು ಇನ್ನಷ್ಟು ವ್ಯಾಪಕವಾಗಿ ಮುಂದುವರಿಸುವಂತೆ ಮತ್ತು 18 ವರ್ಷ ಮೀರಿದ ಎಲ್ಲರೂ ಬೂಸ್ಟರ್ ಲಸಿಕೆ ಪಡೆಯುವಂತೆ ಸರಕಾರ ಸೂಚಿಸಿದೆ. ಬ್ರಿಟನ್ ಕೂಡಾ ಬೂಸ್ಟರ್ ಲಸಿಕೆ ಪ್ರಕ್ರಿಯೆಗೆ ವೇಗ ನೀಡಲು ನಿರ್ಧರಿಸಿದೆ.

ಒಮೈಕ್ರಾನ್ ಪ್ರಬೇಧದ ಆತಂಕ ಹೆಚ್ಚುತ್ತಿರುವಂತೆಯೇ ಹಲವು ದೇಶಗಳು ಗಡಿಭಾಗದಲ್ಲಿ ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸಿದ್ದು ಕಳೆದ ವರ್ಷದ ಲಾಕ್‌ಡೌನ್ ಹಾಗೂ ಆರ್ಥಿಕ ಕುಸಿತದ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ನಿರ್ಧರಿಸಿವೆ. ಅಂಗೋಲಾ, ಇಥಿಯೋಪಿಯಾ, ನೈಜೀರಿಯಾ ಮತ್ತು ಝಾಂಬಿಯಾದಿಂದ ಬರುವ ಪ್ರಯಾಣಿಕರು ದೇಶ ಪ್ರವೇಶಿಸುವುದಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಾಂಕಾಂಗ್ ಅಧಿಕಾರಿಗಳು ವಿಸ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News