ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2021-11-30 17:44 GMT

ಮಂಗಳೂರು, ನ.30: ಅಸಂಘಟಿತ ಕಾರ್ಮಿಕರ ಸಮಗ್ರ ದತ್ತಾಂಶವನ್ನು ಸಿದ್ಧಪಡಿಸಲು ಜಿಲ್ಲೆಯಲ್ಲಿರುವ 16 ರಿಂದ 59 ವರ್ಷದೊಳಗಿನ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಕಡ್ಡಾಯವಾಗಿ ಈ ಶ್ರಮ ಪೋರ್ಟಲ್ನಲ್ಲಿ ನೋಂದಾಯಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡಾಟಾಬೇಸ್ ರಚಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರನ್ನು ಪೋರ್ಟಲ್‌ನಲ್ಲಿ ನೋಂದಾಯಿಸುವುದರಿಂದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಾರೆ, ಅಲ್ಲದೇ ಸರಕಾರಕ್ಕೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಅನುಕೂಲವಾಗಲಿದೆ, ಮುಖ್ಯವಾಗಿ ಕಾರ್ಮಿಕರು ಆಕಸ್ಮಿಕವಾಗಿ ಸಾವಿಗೀಡಾದರೆ ಹಾಗೂ ಪೂರ್ಣ ಅಂಗವೈಕಲ್ಯಕ್ಕೆ ಒಳಗಾದರೆ ಎರಡು ಲಕ್ಷ ರೂ.ಗಳ ನೆರವು ಪಡೆಯಲಿದ್ದಾರೆ, ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಲು ಇದು ನೆರವು ನೀಡಲಿದೆ ಎಂದು ಡಿಸಿ ಹೇಳಿದರು.

16ರಿಂದ 59 ವರ್ಷದೊಳಗಿನವರು, ಇಎಸ್‌ಐ ಹಾಗೂ ಪಿಎಫ್ ಇರದ, ಆದಾಯ ತೆರಿಗೆಗೆ ಒಳಪಡದವರು, ಆಧಾರ್ ಕಾರ್ಡ್, ಆಧಾರ್‌ಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಇ-ಶ್ರಮ ಪೋರ್ಟಲ್ www.eshram.gov.in ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳ ಬಹುದಾಗಿದೆ ಎಂದು ಹೇಳಿದರು.

ಈ ಶ್ರಮ ಪೋರ್ಟಲ್ನಲ್ಲಿ ನೋಂದಣಿ ಉಚಿತವಾಗಿದ್ದು, ಯಶಸ್ವಿ ನೊಂದಣಿಯ ನಂತರ ಫಲಾನುಭವಿಗಳು ಗುರುತಿನ ಚೀಟಿ ಪಡೆಯಬಹುದಾಗಿದೆ. ಇದು ದೇಶಾದ್ಯಂತ ಹಾಗೂ ಜೀವಿತಾವಧಿಯ ಮಾನ್ಯತೆ ಹೊಂದಿರುತ್ತದೆ ಎಂದ ಜಿಲ್ಲಾಧಿಕಾರಿ ಅಸಂಘಟಿತ ವಲಯದ ಕಾರ್ಮಿಕರುಗಳ ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿ ಜಿಲ್ಲಾ ಮಟ್ಟದ ಜಾರಿ ಸಮಿತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಈ ಸಮಿತಿಯು ಸಾಮಾನ್ಯ ಸೇವಾ ಕೇಂದ್ರಗಳ ಕಾರ್ಯವೈಖರಿಯನ್ನು ಆಗಾಗ ಪರಿಶೀಲಿಸಿ ನೋಂದಣಿಯ ಗುರಿಯನ್ನು ತಲುಪಬೇಕು, ಸಂಬಂಧಪಟ್ಟ ಇಲಾಖೆಗಳ ಮೂಲಕ ಜಿಲ್ಲೆಯಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರುಗಳಾದ ಬೀಡಿ, ಟೈಲರ್, ಅಕ್ಕಸಾಲಿಗರು, ನರೇಗಾ, ಕೃಷಿ ಕಾರ್ಮಿಕರು, ಮೀನುಗಾರರು, ಇತರೆ ವಲಯದ ಕಾರ್ಮಿಕರುಗಳನ್ನು ನೋಂದಾಯಿಸಲು ಕ್ರಮ ವಹಿಸಬೇಕು ಎಂದು ಡಿಸಿ ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಡಾ.ಕುಮಾರ್, ಮಂಗಳೂರು ಮನಪಾ ಆಯುಕ್ತ ಅಕ್ಷಿ ಶ್ರೀಧರ್, ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್, ಕಾರ್ಮಿಕ ಅಧಿಕಾರಿಗಳಾದ ಕಾವೇರಿ, ಅಮರೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News