ಮೆಗಾ ಹರಾಜಿಗೆ ಮೊದಲು ಹಲವು ಪ್ರಮುಖ ಆಟಗಾರರನ್ನು ಕೈಬಿಟ್ಟ 8 ಐಪಿಎಲ್ ಫ್ರಾಂಚೈಸಿಗಳು

Update: 2021-12-01 08:09 GMT

ಹೊಸದಿಲ್ಲಿ: ಮಂಗಳವಾರ ನಡೆದ ಐಪಿಎಲ್ ರಿಟೆನ್ಶನ್ಸ್  ಸಂದರ್ಭದಲ್ಲಿ ಎಂಟು ವಿದೇಶಿ ಆಟಗಾರರು ಹಾಗೂ  ನಾಲ್ವರು ಹೊಸ ಆಟಗಾರರು ಸೇರಿದಂತೆ ಒಟ್ಟು 27 ಕ್ರಿಕೆಟಿಗರನ್ನು ಅಸ್ತಿತ್ವದಲ್ಲಿರುವ ಎಂಟು ಫ್ರಾಂಚೈಸಿಗಳು ಉಳಿಸಿಕೊಂಡಿವೆ. ಆದರೆ ಹಲವಾರು ಅಗ್ರ ಕ್ರಿಕೆಟಿಗರನ್ನು ಆಯಾ ತಂಡಗಳು ಉಳಿಸಿಕೊಂಡಿಲ್ಲ. ಇದು ಆಟಗಾರರಿಗೆ ಒಳ್ಳೆಯದು ಅಥವಾ ಕೆಟ್ಟದ್ದಾಗಿರಬಹುದು. ಏಕೆಂದರೆ ಅವರು ಹರಾಜಿನ ಮೊದಲು ಎರಡು ಹೊಸ ಫ್ರಾಂಚೈಸಿಗಳಿಂದ ಆಯ್ಕೆಯಾಗಬಹುದು ಅಥವಾ ಹೆಚ್ಚಿನ ಅಥವಾ ಕಡಿಮೆ ಬೆಲೆಗೆ ಹೋಗಲು ಅವಕಾಶವಿರುವ ಹರಾಜು ಪೂಲ್‌ಗೆ ಹಿಂತಿರುಗಬಹುದು.

ರಿಟೆನ್ಶನ್ ಪಟ್ಟಿಯಿಂದ ಕಾಣೆಯಾಗಿರುವ ಪ್ರಮುಖ ಆಟಗಾರರ ಹೆಸರುಗಳ ಪಟ್ಟಿಇಲ್ಲಿದೆ

ಮುಂಬೈ ಇಂಡಿಯನ್ಸ್: ಮೆಗಾ ಹರಾಜಿನ ಮೊದಲು ಪ್ರತಿ ಬಾರಿ ಐಪಿಎಲ್ ರಿಟೆನ್ಶನ್ ನಡೆಯುವಾಗ ಮುಂಬೈ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ . ಈ ವರ್ಷವೂ ಭಿನ್ನವಾಗಿಲ್ಲ. ಐದು ಪ್ರಶಸ್ತಿಗಳೊಂದಿಗೆ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ  ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ (ರೂ. 16 ಕೋಟಿ), ಜಸ್ಪ್ರೀತ್ ಬುಮ್ರಾ (ರೂ. 12 ಕೋಟಿ), ಸೂರ್ಯಕುಮಾರ್ ಯಾದವ್ (ರೂ. 8 ಕೋಟಿ) ಮತ್ತು ಕೀರಾನ್ ಪೊಲಾರ್ಡ್ (ರೂ. 6 ಕೋಟಿ) ಅವರನ್ನು ಉಳಿಸಿಕೊಂಡಿದೆ..

ಬಿಡುಗಡೆ ಮಾಡಲಾದ ಪ್ರಮುಖರು: ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಕೃನಾಲ್ ಪಾಂಡ್ಯ, ಟ್ರೆಂಟ್ ಬೌಲ್ಟ್.

ಚೆನ್ನೈ ಸೂಪರ್ ಕಿಂಗ್ಸ್: ನಾಲ್ಕು ಬಾರಿಯ ಚಾಂಪಿಯನ್ ಸಿಎಸ್‌ಕೆ ರವೀಂದ್ರ ಜಡೇಜಾ (16 ಕೋಟಿ ರೂ.), ಎಂ.ಎಸ್. ಧೋನಿ (ರೂ. 12 ಕೋಟಿ), ಮೊಯೀನ್ ಅಲಿ (ರೂ. 8 ಕೋಟಿ) ಹಾಗೂ ಋತುರಾಜ್ ಗಾಯಕ್‌ವಾಡ್ ರನ್ನು (ರೂ. 6 ಕೋಟಿ) ಉಳಿಸಿಕೊಂಡಿದೆ.

ಬಿಡುಗಡೆ ಮಾಡಲಾದ ಪ್ರಮುಖರು: ಸುರೇಶ್ ರೈನಾ, ಡ್ವೇನ್ ಬ್ರಾವೋ, ಎಫ್ ಡು ಪ್ಲೆಸಿಸ್, ಸ್ಯಾಮ್ ಕರ್ರಾನ್, ದೀಪಕ್ ಚಹಾರ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಎಬಿ ಡಿವಿಲಿಯರ್ಸ್ ಅವರು ಇನ್ನು ಮುಂದೆ ಐಪಿಎಲ್‌ನ ಭಾಗವಾಗುವುದಿಲ್ಲ ಎಂದು ಘೋಷಿಸಿದ ನಂತರ ಆರ್‌ಸಿಬಿಗೆ ಹೆಚ್ಚು ಕಠಿಣ ಆಯ್ಕೆಗಳಿಲ್ಲ. ಆದರೆ ಮುಹಮ್ಮದ್ ಸಿರಾಜ್ ಅವರನ್ನು ಮಾತ್ರ ಉಳಿಸಿಕೊಂಡು  ಕಳೆದ ಋತುವಿನ 'ಪರ್ಪಲ್ ಕ್ಯಾಪ್' ಹೋಲ್ಡರ್ ಹರ್ಷಲ್ ಪಟೇಲ್ ಅವರನ್ನ ಕೈಬಿಟ್ಟಿರುವ ಆರ್ ಸಿಬಿ ನಿರ್ಧಾರವು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ಬಿಡುಗಡೆ ಮಾಡಲಾದ ಪ್ರಮುಖರು: ಹರ್ಷಲ್ ಪಟೇಲ್, ದೇವದತ್ ಪಡಿಕ್ಕಲ್, ಯುಜ್ವೇಂದ್ರ ಚಹಾಲ್

ಕೋಲ್ಕತ್ತಾ ನೈಟ್ ರೈಡರ್ಸ್: ಎರಡು ಬಾರಿ ಐಪಿಎಲ್ ವಿಜೇತ ತಂಡವು ತನ್ನ ವಿಶ್ವಾಸಾರ್ಹ ಕೆರಿಬಿಯನ್ ಫೈರ್‌ಪವರ್‌ಗಳಾದ ಆಂಡ್ರೆ ರಸೆಲ್ ಹಾಗೂ  ಸುನಿಲ್ ನರೇನ್‌ಗೆ ಅಂಟಿಕೊಂಡಿದೆ. ಯುವ ಗನ್‌ಗಳಾದ ವರುಣ್ ಚಕ್ರವರ್ತಿ ಹಾಗೂ  ವೆಂಕಟೇಶ್ ಅಯ್ಯರ್ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿದೆ.

ಬಿಡುಗಡೆಯಾದ ಪ್ರಮುಖರು: ಶುಭಮನ್ ಗಿಲ್, ಇಯಾನ್ ಮೊರ್ಗನ್, ಪ್ಯಾಟ್ ಕಮಿನ್ಸ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ.

ಡೆಲ್ಲಿ ಕ್ಯಾಪಿಟಲ್ಸ್: ಡೆಲ್ಲಿಯು  ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ಅನ್ರಿಚ್ ನಾರ್ಟ್ಜೆ ಅವರನ್ನು ಮಾತ್ರ ಇರಿಸಿಕೊಳ್ಳಲು ಸಾಧ್ಯವಾಯಿತು.

ಬಿಡುಗಡೆಯಾದ ಪ್ರಮುಖ ಆಟಗಾರರು: ಶಿಖರ್ ಧವನ್, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ, ಸ್ಟೀವ್ ಸ್ಮಿತ್, ರವಿಚಂದ್ರನ್ ಅಶ್ವಿನ್, ಮಾರ್ಕಸ್ ಸ್ಟೋನಿಸ್, ಕಾಗಿಸೊ ರಬಾಡ.

ರಾಜಸ್ಥಾನ್ ರಾಯಲ್ಸ್: ರಾಜಸ್ಥಾನವು ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್ ಯಶಸ್ವಿ ಜೈಸ್ವಾಲ್ ಅವರನ್ನು  ಉಳಿಸಿಕೊಂಡಿದೆ.

ಬಿಡುಗಡೆಯಾದ ಪ್ರಮುಖ ಆಟಗಾರರು: ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಮುಸ್ತಾಫಿಝುರ್ ರಹಮಾನ್

ಸನ್‌ರೈಸರ್ಸ್ ಹೈದರಾಬಾದ್: ಸನ್ ರೈಸರ್ಸ್ ತಂಡ  ಕೇನ್ ವಿಲಿಯಮ್ಸನ್, ಹೊಸ ಕ್ರಿಕೆಟಿಗರಾದ ಅಬ್ದುಲ್ ಸಮದ್ ಹಾಗೂ  ಉಮ್ರಾನ್ ಮಲಿಕ್ ಅವರನ್ನು ಉಳಿಸಿಕೊಂಡಿದೆ.

ಬಿಡುಗಡೆಯಾದ ಪ್ರಮುಖ ಆಟಗಾರರು: ಡೇವಿಡ್ ವಾರ್ನರ್, ರಶೀದ್ ಖಾನ್, ಜಾನಿ ಬೈರ್‌ಸ್ಟೋ, ಕೇದಾರ್ ಜಾಧವ್, ಮನೀಶ್ ಪಾಂಡೆ, ಭುವನೇಶ್ವರ ಕುಮಾರ್.

ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ ಇನ್ನು ಮುಂದೆ ಫ್ರಾಂಚೈಸಿಯ ಭಾಗವಾಗುವುದಿಲ್ಲ ಎಂದು ಸೂಚಿಸುವ ಹಲವು ವರದಿ ಬಂದಿದ್ದವು. ಅವೆಲ್ಲವೂ ನಿಜವಾಗಿವೆ. ಪಂಜಾಬ್ ಕಿಂಗ್ಸ್ ಮಯಾಂಕ್ ಅಗರ್ವಾಲ್ ಹಾಗೂ  ಎಡಗೈ ಸೀಮರ್ ಅರ್ಷದೀಪ್ ಸಿಂಗ್ ಅವರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿತು.

ಬಿಡುಗಡೆಯಾದ ಪ್ರಮುಖ ಆಟಗಾರರು: ಕೆಎಲ್ ರಾಹುಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮುಹಮ್ಮದ್ ಶಮಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News