×
Ad

ಮಂಗಳೂರು: ಎಜೆ ಆಸ್ಪತ್ರೆಯಲ್ಲಿ ಪುಟ್ಟ ಬಾಲಕಿಗೆ ಅಪರೂಪದ ಹೃದ್ರೋಗ ಚಿಕಿತ್ಸೆ

Update: 2021-12-01 16:05 IST

ಮಂಗಳೂರು, ಡಿ.1: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 8ರ ಹರೆಯದ ಬಾಲಕಿಗೆ ಆಸ್ಪತ್ರೆಯಲ್ಲಿ ಅಪರೂಪದ ಹೃದ್ರೋಗ ಚಿಕಿತ್ಸೆಯ ಮೂಲಕ ಮರುಜೀವ ನೀಡಲಾಗಿದೆ ಎಂದು ಎಜೆ ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

ಉಡುಪಿ ಜಿಲ್ಲೆಯ ಹಳ್ಳಿಯೊಂದರ 8ವರ್ಷದ ಬಾಲಕಿಯು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಹಿಂದಿನಂತೆ ತನ್ನ ಸ್ನೇಹಿತರೊಂದಿಗೆ ಓಡಲು ಮತ್ತು ಆಟವಾಡಲು ಸಾಧ್ಯವಾಗುತ್ತಿರಲಿಲ್ಲ. ಅವಳನ್ನು ಎ.ಜೆ.ಆಸ್ಪತ್ರೆಯಲ್ಲಿ ಮಕ್ಕಳ ಹೃದ್ರೋಗ ತಜ್ಞ ಡಾ.ಪ್ರೇಮ್ ಆಳ್ವರವರು ಹೃದಯದ ಸ್ಕ್ಯಾನ್ ಮಾಡಿ ಪರೀಕ್ಷಿಸಿದಾಗ ಅಪರೂಪದ ಕೊರೋನರಿ ತೊಂದರೆ ಇರುವುದನ್ನು ಪತ್ತೆ ಹಚ್ಚಲಾಯಿತು.

ಕೊರೋನರಿ ಅರ್ಟರಿಯು ಹೃದಯದ ಸ್ನಾಯುಗಳಿಗೆ ರಕ್ತವನ್ನು ಪೂರೈಸುವ ರಕ್ತನಾಳ. ಈಕೆಯಲ್ಲಿ ರಕ್ತನಾಳವು ಅಶುದ್ಧ ರಕ್ತವನ್ನು ಸಾಗಿಸುವ ನಾಳದಿಂದ ಅಸಹಜವಾಗಿ ಉದ್ಭವಿಸುತ್ತಿತ್ತು. ಈ ತೊಂದರೆಯಿಂದ ಮಗುವಿನ ಹೃದಯ ಸ್ನಾಯು ದುರ್ಬಲಗೊಂಡು, ಮಿಟ್ರಲ್ ವಾಲ್ವ್ ನಿಂದ ಸೋರಿಕೆಯಿಂದಾಗಿ ಹೃದಯದ ಹಿಗ್ಗುವಿಕೆ ಉಂಟಾಗಿ ಉಸಿರಾಟದ ತೊಂದರೆಗೆ ಕಾರಣವಾಗಿತ್ತು.

ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆ ತಜ್ಞರಿಂದ ಮಾಡಲ್ಪಟ್ಟ ಸಂಕೀರ್ಣ ಶಸ್ತ್ರ ಚಿಕಿತ್ಸೆಯ ಮೂಲಕ ರಕ್ತನಾಳವನ್ನು ಸೂಕ್ತವಾದ ಸ್ಥಳಕ್ಕೆ ಮರು ಅಳವಡಿಸಲಾಯಿತು. ಶಸ್ತ್ರ ಚಿಕಿತ್ಸೆಯ ನಂತರದ ಅವಧಿಯಲ್ಲಿ ಯಾವುದೇ ತೊಂದರೆಗಳಿಲ್ಲದೆ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅರಿವಳಿಕೆ ಮತ್ತು ಶಸ್ತ್ರ ಚಿಕಿತ್ಸೆಯ ನಂತರ ಡಾ. ಗುರುರಾಜ್ ತಂತ್ರಿ ಮತ್ತು ಡಾ. ಸುಹಾಸ್ ಆರೈಕೆ ನೀಡಿದ್ದಾರೆ. ಬಾಲಕಿ ಇದೀಗ ನಿಯಮಿತವಾಗಿ ಶಾಲೆಗೆ ಹೋಗುತ್ತಿದ್ದು, ಇತರ ಮಕ್ಕಳಂತೆ ಸಾಮಾನ್ಯವಾಗಿ ಆಡವಾಡಲು ಸಾಧ್ಯವಾಗುತ್ತಿದೆ. ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದೆ ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News