ಮಿಝೋ ಭಾಷೆ ಗೊತ್ತಿರುವ ಮುಖ್ಯ ಕಾರ್ಯದರ್ಶಿ ನೇಮಕಕ್ಕೆ ಪ್ರಧಾನಿ ಮೋದಿಗೆ ಮಿಝೋರಾಂ ಸಿಎಂ ಒತ್ತಾಯ

Update: 2021-12-01 12:07 GMT
ಮಿಝೋರಾಂ ಸಿಎಂ ಝೋರಂಥಂಗ (Photo: ANI)

ಐಝ್ವಾಲ್: ಕೇಂದ್ರ ಸರಕಾರವು ರೇಣು ಶರ್ಮಾ ಅವರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ  ಹುದ್ದೆಗೆ ನೇಮಿಸಿದ ಒಂದು ತಿಂಗಳ ನಂತರ  ರಾಜ್ಯದಲ್ಲಿ ಮಿಝೋ ಭಾಷೆಯ ಬಗ್ಗೆ ಕೆಲಸ ಮಾಡುವ ಜ್ಞಾನವನ್ನು ಹೊಂದಿರುವ ಹೊಸ ಮುಖ್ಯ ಕಾರ್ಯದರ್ಶಿಯೊಬ್ಬರನ್ನು ನೇಮಿಸುವಂತೆ ಮಿಝೋರಾಂ ಮುಖ್ಯಮಂತ್ರಿ ಝೋರಂಥಂಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಒಂದು ತಿಂಗಳ ಹಿಂದೆ ಸಿಎಂ ಝೋರಂಥಂಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಇದೇ ವಿಷಯವನ್ನು ಪ್ರಸ್ತಾಪಿಸಿದ್ದರು.

ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿರುವ ಝೋರಂಥಂಗ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮುಖ್ಯ ಕಾರ್ಯದರ್ಶಿ ನೇಮಕ ಹಾಗೂ ಮ್ಯಾನ್ಮಾರ್ ನಿರಾಶ್ರಿತರ ಪುನರ್ವಸತಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪರಿಣಾಮಕಾರಿ ಆಡಳಿತಕ್ಕಾಗಿ "ಮಿಝೋ ಭಾಷೆಯ ಬಗ್ಗೆ ಕೆಲಸ ಮಾಡುವ ಜ್ಞಾನ" ಹೊಂದಿರುವ ಮುಖ್ಯ ಕಾರ್ಯದರ್ಶಿಯನ್ನು ನೇಮಿಸಬೇಕೆಂಬ ತಮ್ಮ ಸರಕಾರದ ಕೋರಿಕೆಯನ್ನು ಪರಿಗಣಿಸುವಂತೆ ಮಿಝೋರಾಂ ಸಿಎಂ ಸಭೆಯಲ್ಲಿ ಪ್ರಧಾನಿಗೆ ಮನವಿ ಮಾಡಿದರು. ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಪ್ರಧಾನಿ ಭರವಸೆ ನೀಡಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News