ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಗಾಳಿಮಳೆ; ಸಿಡಿಲು ಬಡಿದು ಓರ್ವ ಗಾಯ
ಉಡುಪಿ, ಡಿ.1: ಕಳೆದ ರಾತ್ರಿ ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಗಾಳಿಮಳೆಯಾಗಿದ್ದು, ಸಿಡಿಲು ಬಡಿದು ಒಬ್ಬರು ಗಾಯಗೊಂಡಿದ್ದಾರೆ. ಮಳೆಯಿಂದಾಗಿ ಜಿಲ್ಲೆಯ ಒಟ್ಟು 17 ಮನೆಗಳಿಗೆ ಹಾನಿಯಾಗಿ 6.20ಲಕ್ಷ ರೂ. ನಷ್ಟ ಉಂಟಾಗಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ- 15.2ಮಿ.ಮೀ., ಬ್ರಹ್ಮಾವರ- 14.9ಮಿ.ಮೀ., ಕಾಪು -13.2ಮಿ.ಮೀ., ಕುಂದಾಪುರ- 20.0ಮಿ.ಮೀ., ಬೈಂದೂರು- 16.7ಮಿ.ಮೀ., ಕಾರ್ಕಳ- 17.1ಮಿ.ಮೀ., ಹೆಬ್ರಿ- 14.9 ಮಿ.ಮೀ. ಹಾಗೂ ಜಿಲ್ಲೆಯಲ್ಲಿ ಸರಾಸರಿ 16.8 ಮಿ.ಮೀ .ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದಲ್ಲಿ ನಿನ್ನೆ ರಾತ್ರಿ ಸಿಡಿಲು ಬಡಿದ ಪರಿಣಾಮ ಸ್ಥಳೀಯ ನಿವಾಸಿ ಮಣಿಕಂಠ ಎಂಬವರು ತೀವ್ರವಾಗಿ ಗಾಯ ಗೊಂಡಿದ್ದಾರೆ. ಇದೀಗ ಇವರು ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಕೃಷ್ಣ ನಾಯ್ಕ, ನಾಲ್ಕೂರು ಗ್ರಾಮದ ವಾಸು ನಾಯ್ಕ, ಪುರುಷ ನಾಯ್ಕ, ಸುಧಾಕರ ಶೆಟ್ಟಿ, ಸುಬ್ಬು ಬಾಯಿ, ಕಂಚು ಶೆಟ್ಟಿ, ರವಿ ನಾಯ್ಕ, ರವೀಂದ್ರ ನಾಯ್ಕ, ಪಾರ್ವತಿ ಬಾಯಿ, ಲಕ್ಷ್ಮಣ ನಾಯ್ಕ, ಸುಬ್ಬಣ್ಣ ನಾಯ್ಕ, ಕುಳ್ಳ ನಾಯ್ಕ, ಪಾರ್ವತಿ, ಗಂಗೆ, ಶೀನ ನಾಯ್ಕ ಎಂಬವರ ಮನೆಗಳು ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿ ಒಟ್ಟು 2.85ಲಕ್ಷ ರೂ. ನಷ್ಟ ಉಂಟಾಗಿದೆ. ಸ್ಥಳಕ್ಕೆ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ ಹಾಗೂ ಕಂದಾಯ ಅಧಿಕಾರಿಗಳುಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅದೇ ರೀತಿ ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಸೌಮ್ಯ ಎಂಬವರ ಮನೆ ಮನೆ ಭಾಗಶಃ ಹಾನಿಯಾಗಿ 40,000 ರೂ. ಮತ್ತು ಬಸ್ರೂರು ಗ್ರಾಮದ ಗಿರಿಜ ಎಂಬವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ 300,000 ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಗಳ ಮೂಲಗಳು ತಿಳಿಸಿವೆ.
ಗಾಳಿಮಳೆಯಿಂದಾಗಿ ಜಿಲ್ಲೆಯಲ್ಲಿ ಎರಡು ಟ್ರಾನ್ಸ್‌ಫಾರ್ಮರ್ ಗಳು, 29 ವಿದ್ಯುತ್ ಕಂಬಗಳು, 0.62ಕಿ.ಮೀ. ವಿದ್ಯುತ್ ತಂತಿ ಹಾನಿಯಾಗಿದ್ದು, ಇದರಿಂದ ಮೆಸ್ಕಾಂಗೆ ಒಟ್ಟು 5.21ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಗಾಳಿಮಳೆಯಿಂದಾಗಿ ಜಿಲ್ಲೆಯಲ್ಲಿ ಎರಡು ಟ್ರಾನ್ಸ್‌ಫಾರ್ಮರ್‌ಗಳು, 29 ವಿದ್ಯುತ್ ಕಂಬಗಳು, 0.62ಕಿ.ಮೀ. ವಿದ್ಯುತ್ ತಂತಿ ಹಾನಿಯಾಗಿದ್ದು, ಇದರಿಂದ ಮೆಸ್ಕಾಂಗೆ ಒಟ್ಟು 5.21ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.