ಚುನಾವಣೆ ಸಮೀಪಿಸುವಾಗ ಮಾತ್ರ ಚುರುಕುಗೊಳ್ಳುವ ಉಜ್ವಲ ಯೋಜನೆ: ಆರ್ ಟಿ ಐ ಉತ್ತರದಿಂದ ಬಹಿರಂಗ

Update: 2021-12-01 13:35 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ, ಡಿ.1: ಗ್ರಾಮೀಣ ಕುಟುಂಬಗಳಿಗೆ ಅಡಿಗೆ ಅನಿಲ (ಎಲ್ಪಿಜಿ) ಸಂಪರ್ಕಗಳನ್ನು ಉಚಿತವಾಗಿ ಲಭ್ಯವಾಗಿಸುವ ಉದ್ದೇಶವನ್ನು ಹೊಂದಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅನುಷ್ಠಾನ 2019ರ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಾಗ ಹೆಚ್ಚಿನ ವೇಗವನ್ನು ಪಡೆದುಕೊಂಡಿತ್ತು ಎನ್ನುವುದನ್ನು (indianexpress.com) ಗೆ ಲಭಿಸಿರುವ ಆರ್ಟಿಐ ಉತ್ತರವು ಬಹಿರಂಗಗೊಳಿಸಿದೆ.

ಉಜ್ವಲ ಯೋಜನೆಯಡಿ ಫಲಾನುಭವಿಗಳ ವಿವರಗಳನ್ನು ಕೋರಿ ಸಲ್ಲಿಸಲಾಗಿದ್ದ ಆರ್ಟಿಐ ಅರ್ಜಿಗೆ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ನೀಡಿರುವ ಉತ್ತರದಂತೆ 2016-17ರಲ್ಲಿ 1,93,05,327 ಉಚಿತ ಹೊಸ ಸಂಪರ್ಕಗಳನ್ನು ಒದಗಿಸಲಾಗಿತ್ತು. 2017-18ರಲ್ಲಿ ಇದು 1,58,69,857ಕ್ಕೆ ಕುಸಿದಿದ್ದರೆ 2018-19ರಲ್ಲಿ ಶೇ.100ಕ್ಕೂ ಅಧಿಕ ಏರಿಕೆಯೊಂದಿಗೆ 3,57,64,417ಕ್ಕೆ ತಲುಪಿತ್ತು. ಮುಂದಿನ ವರ್ಷ ಈ ಸಂಖ್ಯೆ 90,60,124ಕ್ಕೆ ಕುಸಿದಿತ್ತು.

2016ರಲ್ಲಿ ಉಜ್ವಲ ಯೋಜನೆಯನ್ನು ಆರಂಭಿಸಿದ್ದ ನರೇಂದ್ರ ಮೋದಿ ಸರಕಾರವು ಅದನ್ನು ಅನುಷ್ಠಾನಿಸಲು ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ಅಧಿಕಾರ ನೀಡಿತ್ತು. 2020ರ ವೇಳೆಗೆ ವಂಚಿತ ಕುಟುಂಬಗಳಿಗೆ ಎಂಟು ಕೋಟಿ ಎಲ್ಪಿಜಿ ಸಂಪರ್ಕಗಳನ್ನು ಉಚಿತವಾಗಿ ಒದಗಿಸುವ ಗುರಿಯನ್ನು ಯೋಜನೆಯು ಹೊಂದಿತ್ತು. ಮಾರ್ಚ್ 2020ರ ಗಡುವಿಗೆ ಏಳು ತಿಂಗಳು ಮೊದಲೇ ಆಗಸ್ಟ್ 2019ರಲ್ಲಿ ಈ ಗುರಿಯನ್ನು ಸಾಧಿಸಲಾಗಿತ್ತು.

ಆದಾಗ್ಯೂ ಯೋಜನೆಯಡಿ ಎಲ್ಪಿಜಿ ಸಂಪರ್ಕಗಳ ಪೂರೈಕೆಯ ವರ್ಷವಾರು ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ 2019ರ ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗಿದ್ದಾಗ ಗರಿಷ್ಠ ಸಂಪರ್ಕಗಳನ್ನು ಒದಗಿಸಲಾಗಿತ್ತು ಎನ್ನುವುದು ಕಂಡುಬರುತ್ತದೆ ಎಂದು indianexpress.com ವರದಿ ಮಾಡಿದೆ.

ಉಜ್ವಲ ಯೋಜನೆ ಆರಂಭಗೊಂಡ 2016-17ರಲ್ಲಿ ದಿಲ್ಲಿಯಲ್ಲಿ ಒಟ್ಟು ಕೇವಲ 463 ಎಲ್ಪಿಜಿ ಸಿಲಿಂಡರ್ಗಳನ್ನು ವಿತರಿಸಲಾಗಿದ್ದು,2017-18ರಲ್ಲಿ ಇದು ಕೇವಲ 18ಕ್ಕೆ ಕುಸಿದಿತ್ತು. ಆದರೆ 2018-19ರಲ್ಲಿ 73,251ಕ್ಕೆ ಹೆಚ್ಚಳಗೊಂಡಿದ್ದ ಈ ಸಂಖ್ಯೆ ಮುಂದಿನ ವರ್ಷ 3,110ಕ್ಕೆ ಇಳಿದಿತ್ತು. ತೆಲಂಗಾಣದಲ್ಲಿ 2016-17ರಲ್ಲಿ ಕೇವಲ 40 ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲಾಗಿದ್ದರೆ 2017-18ರಲ್ಲಿ ಈ ಸಂಖ್ಯೆ ಶೂನ್ಯಕ್ಕಿಳಿದಿತ್ತು.

ರಾಜ್ಯ ವಿಧಾನಸಭೆಗೆ ಎರಡನೇ ಚುನಾವಣೆ ನಡೆದಿದ್ದ 2018-19ರಲ್ಲಿ ಉಚಿತ ಸಂಪರ್ಕಗಳ ಸಂಖ್ಯೆ 9,16,299ಕ್ಕೆ ಜಿಗಿದಿತ್ತು. ಇದೇ ರೀತಿ ಕೇರಳದಲ್ಲಿ 2016-17ರಲ್ಲಿ ಒಟ್ಟು 10,872 ಸಂಪರ್ಕಗಳನ್ನು ಒದಗಿಸಲಾಗಿದ್ದರೆ 2017-18ರಲ್ಲಿ 27,630ಕ್ಕೆ ತಲುಪಿತ್ತು. ಆದರೆ ಮುಂದಿನ ವರ್ಷ ಈ ಸಂಖ್ಯೆ 1,70,988ಕ್ಕೆ ಏರಿಕೆಯಾಗಿತ್ತು.

ಹಿಂದಿ ಭಾಷಿಕ ರಾಜ್ಯಗಳಲ್ಲಿಯೂ ಅಂಕಿಅಂಶಗಳು ಆಸಕ್ತಿದಾಯಕ ಕಥೆಯನ್ನು ಹೇಳುತ್ತಿವೆ. 2016-2017ನಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ (ಮಾರ್ಚ್,2017)ಗೆ ಮುನ್ನ ಯೋಜನೆಯಡಿ ಗರಿಷ್ಠ, ಅಂದರೆ 54,64,190 ಉಚಿತ ಸಂಪರ್ಕಗಳನ್ನು ಒದಗಿಸಲಾಗಿತ್ತು. ಚುನಾವಣೆ ಮುಗಿದ ಮರುವರ್ಷವೇ ಈ ಸಂಖ್ಯೆ 10 ಲಕ್ಷಕ್ಕೆ ಕುಸಿದಿತ್ತು. ಆದರೆ ಸಾರ್ವತ್ರಿಕ ಚುನಾವಣೆಗೆ ಮುಂಚಿನ ವರ್ಷ(2018-19)ದಲ್ಲಿ ಉಚಿತ ಸಂಪರ್ಕಗಳ ಸಂಖ್ಯೆ 63,17,525ಕ್ಕೇರಿತ್ತು.

ಪ.ಬಂಗಾಳದಲ್ಲಿ ಉಚಿತ ಸಂಪರ್ಕಗಳ ವಿತರಣೆ 2016-17(23,80,518), 2018-18 (26,27,299) ಮತ್ತು 2018-19 (29,46,062)ನೇ ಹಣಕಾಸು ವರ್ಷಗಳಲ್ಲಿ ಹೆಚ್ಚುಕಡಿಮೆ ಸ್ಥಿರವಾಗಿತ್ತು. ಆದಾಗ್ಯೂ ಕರ್ನಾಟಕದಲ್ಲಿಯೂ ಉಚಿತ ಅನಿಲ ಸಂಪರ್ಕಗಳ ಅಂಕಿಅಂಶಗಳು ಉಜ್ವಲ ಯೋಜನೆಯೊಂದಿಗೆ ಜನತೆಯ ವಿಶ್ವಾಸವನ್ನು ಗೆಲ್ಲಲು ಬಿಜೆಪಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನುವುದನ್ನು ಬೆಟ್ಟು ಮಾಡುತ್ತಿವೆ. 2016-17ರಲ್ಲಿ ಕರ್ನಾಟಕದಲ್ಲಿ ಕೇವಲ 6,024 ಉಚಿತ ಅನಿಲ ಸಂಪಕಗಳನ್ನು ವಿತರಿಸಲಾಗಿತ್ತು. ಆದರೆ ಈ ಸಂಖ್ಯೆ 2017-18ರಲ್ಲಿ 8,95,333ಕ್ಕೆ ಮತ್ತು 2018-19ರಲ್ಲಿ 18,54,061ಕ್ಕೆ ಏರಿಕೆಯಾಗಿತ್ತು. 2018ರಲ್ಲಿ ರಾಜ್ಯ ವಿಧಾನಸಭಾ ಮತ್ತು ಮೇ 2019ರಲ್ಲಿ ಲೋಕಸಭಾ ಚುನಾವಣೆಗಳು ನಡೆದಿದ್ದವು. ಅತ್ತ ಅಸ್ಸಾಮಿನಲ್ಲಿಯೂ 2016-17ರಲ್ಲಿ ಕೇವಲ 2ರಷ್ಟಿದ್ದ ಉಚಿತ ಎಲ್ಪಿಜಿ ಸಂಪರ್ಕಗಳ ಸಂಖ್ಯೆ 2017-18ರಲ್ಲಿ 10 ಲ. ಮತ್ತು 2018-19ರಲ್ಲಿ 17 ಲ.ದಾಟಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News