ಕೊಂಡಾಡಿ ಕೊರಗರ ಮನೆ ನಿವೇಶನದ ತಡೆಗೋಡೆ ಕುಸಿತ; ತನಿಖೆಗೆ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಒತ್ತಾಯ
ಉಡುಪಿ, ಡಿ.1: ಬೊಮ್ಮಾರಬೆಟ್ಟು ಗ್ರಾಮದ ಕೊಂಡಾಡಿಯ ಕೊರಗರ ಮನೆ ನಿವೇಶನವನ್ನು ಸಮತಟ್ಟುಗೊಳಿಸಿ ಸುಮಾರು 50ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ತಡೆಗೋಡೆಯು ಕಳಪೆ ಕಾಮಗಾರಿಯಿಂದ ಈ ವರ್ಷದ ಮೊದಲ ಮಳೆಗೆ ಕುಸಿದು ಬಿದ್ದಿದೆ. ಈ ಅಸುರಕ್ಷಿತ ನಿವೇಶನದಲ್ಲಿ ಮನೆ ನಿರ್ಮಿಸಲು ನಿರಾಕರಿಸುತ್ತಿರುವ ಕೊರಗ ಮಹಿಳೆಯರಿಗೆ ಬದಲಿ ನಿವೇಶನ ನೀಡುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಉಡುಪಿ ಜಿಲ್ಲಾ ನ್ಯಾಯಾಧೀಶರಿಗೆ ದೂರು ನೀಡಿದೆ.
ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶ್ಯಾನುಭಾಗ್ ಈ ಬಗ್ಗೆ ಮಾಹಿತಿ ನೀಡಿದರು.
ಸರಕಾರ ಮಂಜೂರು ಮಾಡಿದ ಕೊಂಡಾಡಿಯ ಮನೆ ನಿವೇಶನ ನೀಡುವಂತೆ 2011ರಿಂದ 11 ವರ್ಷಗಳ ಕಾಲ ಕೊರಗ ಮಹಿಳೆಯರು ನಡೆಸಿದ ಹೋರಾಟ ಪರಿಣಾಮವಾಗಿ, ಇಲ್ಲಿನ 2.61 ಎಕರೆ ಜಾಗದಲ್ಲಿ ಒಟ್ಟು 23 ಕೊರಗ ಕುಟುಂಬ ಗಳಿಗೆ ತಲಾ 8 ಸೆಂಟ್ಸ್‌ಗಳಂತೆ ನಿವೇಶನಗಳನ್ನು ನೀಡಲಾಯಿತು. ನಿವೇಶನ ದಾರರು ಮಾನವ ಹಕ್ಕುಗಳ ಆಯೋಗ, ಲೋಕಾಯುಕ್ತಕ್ಕೆ ನೀಡಿದ ಅರ್ಜಿಗಳಿಗೆ ಉತ್ತರಿಸುವ ಅವಸರದಿಂದ ಗಿರಿಜನ ಯೋಜನಾ ಸಮನ್ವಯ ಅಧಿಕಾರಿಗಳು, ಸುಮಾರು 50 ಲಕ್ಷ ರೂ. ವ್ಯಯಿಸಿ ಅವೈಜ್ಞಾನಿಕವಾಗಿ ಗುಡ್ಡ ಕೊರೆದು ಸಮತಟ್ಟು ಮಾಡಿ, 18 ಅಡಿ ಎತ್ತರದ ತಡೆಗೋಡೆಯನ್ನು ನಿರ್ಮಿಸಿದರು.
ತೀರಾ ಕಳಪೆ ಕಾಮಗಾರಿಯಿಂದಾಗಿ ಮಳೆಗಾಲದ ಮೊದಲ ವಾರದಲ್ಲೇ ಇಲ್ಲಿನ ಗುಡ್ಡ ಜರಿದು, ತಡೆಗೋಡೆ ನೆಲಸಮವಾಗಿದೆ. ಒಂದು ವೇಳೆ ಗಿರಿಜನ ಯೋಜನಾಧಿಕಾರಿಗಳ ಸೂಚನೆಯಂತೆ ಕೊರಗರು ಇಲ್ಲಿ ಮನೆ ನಿರ್ಮಿಸುತ್ತಿದ್ದರೆ ಈ ಮಳೆಗಾಲದಲ್ಲಿ ಭಾರೀ ಅನಾಹುತ ಎದುರಿಸಬೇಕಾದೀತು. ಈ ಅಪಾಯ ಕಾರಿ ನಿವೇಶನಗಳಲ್ಲಿ ಮನೆ ನಿರ್ಮಿಸಲು ಕೊರಗ ಕುಟುಂಬಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ರವೀಂದ್ರನಾಥ್ ಶಾನುಭಾಗ್ ತಿಳಿಸಿದರು.
ಆದುದರಿಂದ ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ಮಾಡುವಂತೆ ಜಿಲ್ಲಾ ನ್ಯಾಯಾಧೀಶರಿಗೆ ದೂರು ನೀಡಲಾಗಿದೆ. ನ್ಯಾಯಾಧೀಶರು ಈ ಬಗ್ಗೆ ಪರಿ ಶೀಲನೆ ನಡೆಸಲಿದ್ದಾರೆ. ಅದೇ ರೀತಿ ಈಗ ನೀಡಿರುವ ನಿವೇಶನದ ಬದಲು ಬೇರೆಯೇ ಜಮೀನಿನಲ್ಲಿ ನಿವೇಶನಗಳನ್ನು ನೀಡಬೇಕೆಂದು ನಿವೇಶನದಾರರ ಒತ್ತಾಯವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿವೇಶನದಾರರಾದ ವಿಜಯಲಕ್ಷ್ಮೀ, ಸಮೀರಾ, ಸುಬೇದಾ ಉಪಸ್ಥಿತರಿದ್ದರು.
''ಸಾಕಷ್ಟು ಹೋರಾಟ ಮಾಡಿ ಈ ನಿವೇಶನವನ್ನು ಪಡೆದುಕೊಂಡಿದ್ದೇವು. ಕಲ್ಲು ಬಂಡೆಯಿಂದ ಕೂಡಿದ ಈ ಜಾಗವನ್ನು ಸಮತಟ್ಟುಗೊಳಿಸಿ ಅವೈಜ್ಞಾನಿಕವಾಗಿ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಅಧಿಕಾರಿಗಳು ಮನೆ ನಿರ್ಮಿಸುವಂತೆ ಒತ್ತಾಯಿಸಿದರೂ ನಮಗೆ ಧೈರ್ಯ ಬರಲಿಲ್ಲ. ಇದೀಗ ಜೂನ್‌ನಲ್ಲಿ ಸುರಿದ ಮಳೆಗೆ ಈ ತಡೆಗೋಡೆ ಕುಸಿದು ಬಿದ್ದಿದೆ. ಇದನ್ನು ಮುಚ್ಚಿ ಹಾಕುವ ಪ್ರಯತ್ನ ಕೂಡ ಅಧಿಕಾರಿಗಳು ನಡೆಸಿದ್ದರು. ಸ್ಥಳೀಯರು ನಮಗೆ ಮಾಹಿತಿ ನೀಡಿರುವುದರಿಂದ ಈ ವಿಚಾರ ತಿಳಿಯಿತು. ನಮಗೆ ಇನ್ನು ಇಲ್ಲಿ ನಿವೇಶನ ಬೇಡ. ಬೇರೆ ಜಮೀನಿನಲ್ಲಿ ನಿವೇಶನ ನೀಡಬೇಕು''.
-ವಿಜಯಲಕ್ಷ್ಮೀ, ನಿವೇಶನದಾರರು,