ಉಡುಪಿ : ಬಾವಿಗೆ ಬಿದ್ದ ಗಂಡು ಚಿರತೆಯ ರಕ್ಷಣೆ
ಉಡುಪಿ, ಡಿ.1: ಬೇಟೆಗಾಗಿ ಬಂದು ಆವರಣ ಇಲ್ಲದ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ ಘಟನೆ ಬುಧವಾರ ಕಾವಾಡಿ ಗ್ರಾಮದ ಹವರಾಲು ಎಂಬಲ್ಲಿ ನಡೆದಿದೆ.
ನ.30ರಂದು ರಾತ್ರಿ ವೇಳೆ ಹೌರಾಲ್ ನಿವಾಸಿ ಸುರೇಶ್ ನಾಯ್ಕಿ ಎಂಬವರ ಮನೆಯ ಸಾಕು ನಾಯಿಯ ಬೇಟೆಗಾಗಿ ಬಂದ ಚಿರತೆಯು, ಅವರ ಆವರಣ ಇಲ್ಲದ ಬಾವಿಗೆ ಬಿತ್ತೆನ್ನಲಾಗಿದೆ. ಬೆಳಗ್ಗೆ ವಿಚಾರ ತಿಳಿದ ಮನೆಯವರು ಕೂಡಲೇ ಬ್ರಹ್ಮಾವರ ವಲಯ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಬೋನಿನ ಮೂಲಕ ಬಾವಿಯಿಂದ ಮೇಲಕ್ಕೆತ್ತಿದರು. 4-5 ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ.
ಈ ಚಿರತೆಯನ್ನು ಬ್ರಹ್ಮಾವರ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಆವರಣದಲ್ಲಿ ಇರಿಸಿದ್ದು, ಗುರುವಾರ ಇದನ್ನು ಮಂಗಳೂರಿನ ಪಿಲಿಕುಲಕ್ಕೆ ಒಪ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಉಪ ವಲಯ ಅರಣ್ಯಾಧಿಕಾರಿ ಹರೀಶ್, ಉಡುಪಿ ಕೇಂದ್ರ ಸ್ಥಾನ ಉಪ ಅರಣ್ಯಾಧಿಕಾರಿ ಗುರುರಾಜ್, ಅರ್ಯಣ ರಕ್ಷಕರಾದ ಸುರೇಶ್, ರಮೇಶ್ ಮತ್ತು ಅಕ್ಷಿತಾ ಪಾಲ್ಗೊಂಡಿದ್ದರು.