ಜಾಗೃತಿಯಿಂದ ಮಾತ್ರ ಏಡ್ಸ್ ರೋಗದಿಂದ ದೂರವಿರಲು ಸಾಧ್ಯ: ಡಿಸಿ ಕೂರ್ಮರಾವ್
ಉಡುಪಿ, ಡಿ.1: ಏಡ್ಸ್ ರೋಗದ ಬಗ್ಗೆ ಪ್ರತಿಯೊಬ್ಬರೂ ಅರಿವನ್ನು ಹೊಂದಿ ರಬೇಕು. ಈ ಬಗ್ಗೆ ಜಾಗೃತರಾದಾಗ ಮಾತ್ರ ರೋಗ ದಿಂದ ದೂರ ಉಳಿಯಲು ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿದ್ಯಾರತ್ನ ಸ್ಕೂಲ್ ಕಾಲೇಜ್ ಆಪ್ ನರ್ಸಿಂಗ್, ಲಯನ್ಸ್ ಕ್ಲಬ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆ ಹಾಗೂ ಉದ್ಯಾವರ ಶ್ರೀ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ರೆಡ್‌ಕ್ರಾಸ್ ಮತ್ತು ಎನ್‌ಎಸ್‌ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಅಂಬಲಪಾಡಿ ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಳೆದ ಎರಡು ವರ್ಷದಿಂದ ವಿಶ್ವವನ್ನೇ ಕೋವಿಡ್ ಸೋಂಕು ಕಾಡುತ್ತಿದೆ. ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಹೆಚ್ಚು ಮಹತ್ವ ಕೊಡುವುದರ ಜೊತೆಗೆ ಜಾಗೃತಿ ವಹಿಸಬೇಕು. ಏಡ್ಸ್ ಸೋಂಕಿತರಿಗೆ ಕೋವಿಡ್ ಸೋಂಕು ತಗುಲಿದಾಗ ಅದರ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಿನ್ನೆಲೆ ಅವು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದರು.
ಜಿಲ್ಲೆಯಲ್ಲಿ 3,826 ಸೋಂಕಿತರನ್ನು ಗುರುತಿಸಿ, ಅವರುಗಳಿಗೆ ಎ.ಆರ್.ಟಿ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಜನನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ತಗಲದೇ ಇರುವಂತೆ ಆರೋಗ್ಯ ಇಲಾಖೆಯವರು ಎಚ್ಚರ ವಹಿಸಿದ್ದಾರೆ. ಅಸಮಾನತೆ ಯನ್ನು ಹೋಗಲಾಡಿಸಿದರೆ ಕೋವಿಡ್ ಸೋಂಕು ಸೇರಿದಂತೆ ಇತರೆ ಸಾಂಕ್ರಾ ಮಿಕ ರೋಗಗಳನ್ನು ಹೋಗಲಾಡಿಸುವುದು ಸುಲಭ ಎಂದು ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಮಾತನಾಡಿ, ಎಚ್‌ಐವಿ ವೈರಾಣು ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯನ್ನು ಹಾಳುಗೆಡವುತ್ತದೆ. ಸಮಾಜದಲ್ಲಿ ಸೋಂಕಿತರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಸೋಂಕಿತರು ಸಾವೇ ಗತಿಯೆಂಬ ಮನೋಭಾವ ಹೊಂದಿ ಪೂರ್ಣಗ್ರಹ ಪೀಡಿತರಾಗದೇ ಅದರ ವಿರುದ್ಧ ಹೋರಾಡುವ ಮನೋಭಾವವನ್ನು ಬೆಳೆಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ. ಮಾತನಾಡಿದರು. ಇದೇ ಸಂದರ್ದಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಡಾ.ಚಂದ್ರಶೇಖರ್ ಅಡಿಗ, ಡಾ.ಲೆಸ್ಲೀ ಎಡ್ವರ್ಡ್ ಲೂಯಿಸ್, ಬಿಂದಿಯಾ ಶೆಟ್ಟಿ, ರವೀಂದ್ರ ಖಾರ್ವಿ, ಸುಪ್ರೀತಾ, ಭಾರ್ಗವಿ ಐತಾಳ್, ಜಯಕರ ಶೆಟ್ಟಿ, ಜಯಶ್ರೀ ಭಟ್, ಶಿವಪ್ರಸಾದ್ ಶೆಟ್ಟಿ, ವೆಂಕಟೇಶ್, ಬಾಲರಾಜ್ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್‌ನ ರವಿರಾಜ್ ನಾಯಕ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ಗಣೇಶ್ ವಿ., ಆಸರೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸಂಜೀವ್ ವಂಡ್ಸೆ ಮಾತನಾಡಿದರು. ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್ ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾ ನಂದ ಸಂಜು ಎಸ್.ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು