ಕೌಶಲ್ಯ ತರಬೇತಿಯಿಂದ ಕೈದಿಗಳಿಗೆ ಸ್ವಾವಲಂಬಿ ಜೀವನ ಸಾಧ್ಯ: ನ್ಯಾ.ಶರ್ಮಿಳಾ
ಉಡುಪಿ, ಡಿ.1: ಜೈಲು ಅಂದರೆ ಕೈದಿಗಳಿಗೆ ಶಿಕ್ಷೆ ನೀಡುವುದು ಮಾತ್ರವಲ್ಲ ಅವರ ಮನಃಪರಿವರ್ತನೆ ಮಾಡುವ ಕೇಂದ್ರಗಳೂ ಆಗಿವೆ. ಜೈಲಿನಲ್ಲಿದ್ದ ಅವಧಿಯಲ್ಲಿ ಕೈದಿಗಳು ಕೌಶಲಯುಕ್ತ ತರಬೇತಿ ಪಡೆಯುವುದರಿಂದ, ಬಿಡು ಗಡೆಯ ನಂತರ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಹೇಳಿದ್ದಾರೆ.
ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಕಾರಾಗೃಹ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕೌಶಲ್ಯ ಆಭಿವೃದ್ಧಿ ಇಲಾಖೆ, ಆರ್ಟ್ ಆಪ್ ಲಿವಿಂಗ್ ಉಡುಪಿ ಇವುಗಳ ಸಹಯೋಗದಲ್ಲಿ ಕಾರಾಗೃಹ ಬಂಧಿಗಳು ಮತ್ತು ಸಿಬ್ಬಂದಿಗಳ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಬುಧವಾರ ಕಾಜಾರ ಗುತ್ತುನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಲಾದ ಯೋಗ ತರಬೇತಿ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರಾಗೃಹದಲ್ಲಿನ ಕೈದಿಗಳಿಗೆ ಕೌಶಲ್ಯ ತರಬೇತಿ ನೀಡುವುದರಿಂದ ಅವರ ಬಿಡುಗಡೆಯ ನಂತರ ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆಯಲು ಸಹಾಯ ವಾಗುತ್ತದೆ. ಅಲ್ಲದೇ ಶಿಕ್ಷೆಯ ಅವಧಿಯಲ್ಲಿ ಯಾವುದಾದರೊಂದು ಕಾರ್ಯದಲ್ಲಿ ತೊಡಗಿ ಕೊಳ್ಳುವುದರಿಂದ ಅವರ ಮಾನಸಿಕ ಆರೋಗ್ಯ ಮತ್ತು ಆತ್ಮ ವಿಶ್ವಾಸ ವೃದ್ಧಿಯಾಗುತ್ತದೆ. ಕೆಟ್ಟ ಆಲೋಚನೆಗಳು ಅವರಲ್ಲಿ ಮೂಡುವುದಿಲ್ಲ ಹಾಗೂ ಅವರಲ್ಲಿನ ಕೌಶಲ್ಯ ಪ್ರತಿಭೆ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮಾತನಾಡಿ, ಬದಲಾವಣೆ ಬೆಳವಣಿಗೆಯ ಸಂಕೇತ. ಕೌಶಲ್ಯ ತರಬೇತಿಯ ಮೂಲಕ ಕೈದಿಗಳು ಹೊಸ ಬದುಕಿಗೆ ಕಾಲಿಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ತಪ್ಪಿನಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ನಡೆದು ಕೊಳ್ಳಬೇಕು. ಎಲ್ಲರನ್ನೂ ಕ್ಷಮಿಸುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗ ಲಿದೆ ಎಂದರು.
ಆರ್ಟ್ ಆಪ್ ಲಿವಿಂಗ್ ಉಡುಪಿಯ ಯೋಗ ಶಿಕ್ಷಕಿ ವಿಮಲಾಕ್ಷಿ ದಿವಾಕರ್ ಯೋಗದ ಮಹತ್ವ ವಿವರಿಸಿದರು. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಜಗದೀಶ್, ಯೋಗ ಶಿಕ್ಷಕ ರವಿ ಬಂಗೇರಾ, ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀನಿವಾಸ್ ಸ್ವಾಗತಿಸಿ, ವಂದಿಸಿದರು.