ಬಿಜೆಪಿ ಸರಕಾರ ಬಂದರೂ ಗೋಹತ್ಯೆ ಪೂರ್ಣ ನಿಂತಿಲ್ಲ: ಸಚಿವ ಈಶ್ವರಪ್ಪ

Update: 2021-12-01 16:14 GMT

ಮಣಿಪಾಲ, ಡಿ.1: ಬಿಜೆಪಿ ಸರಕಾರ ಬಂದರೂ ಗೋಹತ್ಯೆ ಪೂರ್ಣ ನಿಂತಿಲ್ಲ. ಗೋಕಳ್ಳರ ವಿರುದ್ಧ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳದ ಬಗ್ಗೆ ಸಚಿವನಾಗಿ ನನಗೂ ಅಸಮಾಧಾನ ಇದೆ. ಇದನ್ನೆಲ್ಲ ನೋಡುವಾಗ ನನಗೆ ಹೊಟ್ಟೆ ಉರಿಯುತ್ತಿದೆ. ಪೂರ್ಣ ಗೋಹತ್ಯೆ ನಿಲ್ಲಿಸಲು ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು. ಗೋಹತ್ಯೆ ಮಾಡುವವರಿಗೆ ಬಲೆ ಹಾಕುತ್ತೇವೆ ಮತ್ತು ಬಲಿ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ತೀರ್ಥಹಳ್ಳಿ ಸಮೀಪ ದನ ಸಾಗಾಟದ ವೇಳೆ ವಾಹನ ದಾಳಿಯಿಂದ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಜರಂಗದಳದ ಕಾರ್ಯಕರ್ತ ಚರಣ್‌ನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.

ಗೋವು ಹಂತಕರಿಗೆ ಭಯ ಹುಟ್ಟಿಸಲು ಕಾನೂನು ಜಾರಿಗೆ ತಂದಿದ್ದೇವೆ. ಶಾಸನ ಭಯ ಹುಟ್ಟಿಸಲು ಸಮರ್ಥವಾಗಿದೆ. ಪೊಲೀಸ್ ಇಲಾಖೆ ಇನ್ನಷ್ಟು ಬಿಗಿಯಾಗಬೇಕು. ಗೋವು ಹಂತಕರನ್ನು ತಡೆಯಲು ಪೊಲೀಸರಿಗೂ ಭಯ ಇದೆ. ತಮ್ಮ ಕುಟುಂಬದ ಜೊತೆ ಜೀವ ಭಯದಿಂದ ಕೆಲಸ ಮಾಡಬೇಕಾಗುತ್ತದೆ. ಪೊಲೀಸ್ ಇಲಾಖೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಕಾಯ್ದೆ ಗಟ್ಟಿ ಇಲ್ಲ ಎಂದಾದರೆ ಮತ್ತೆ ಬಿಗಿಗೊಳಿಸುತ್ತೇವೆ. ಬಿಜೆಪಿಗರು ಗೋವನ್ನು ತಾಯಿ ಸಮಾನವಾಗಿ ನೋಡುತ್ತಾರೆ. ಪ್ರವಾಸ ಒತ್ತಡದ ನಡುವೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಇಬ್ಬರು ಆರೋಪಿಗಳ ಬಂಧನವಾಗಿದೆ. 19 ಹಸುಗಳ ರಕ್ಷಣೆಯಾಗಿದೆ. ಗಾಯಾಳುಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸಂಘಟನೆ ಮತ್ತು ಸರಕಾರ ಗಾಯಾಳುಗಳಿಗೆ ನೆರವು ನೀಡುತ್ತದೆ. ಕುಟುಂಬ ದಿಂದ ಗಾಯಾಳುಗಳಿಗೆ ಒಂದು ಪೈಸೆಯೂ ಖರ್ಚಾಗದಂತೆ ನೋಡಿಕೊಳ್ಳುತ್ತೇವೆ. ಅಕ್ರಮ ಮುಂದುವರಿಸಿದರೆ ನಾವು ಅಂಥವರನ್ನು ಬಲಿ ತೆಗೆದುಕೊಳ್ಳುತ್ತೇವೆ ಎಂದರು.

ಗೃಹ ಸಚಿವರ ಭೇಟಿ: ಗೃಹ ಸಚಿವ ಅರಗ ಜ್ಞಾನೇಂದ್ರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಇಂದು ಬೆಳಗ್ಗೆ ಭೇಟಿ ನೀಡಿ ಗಾಯಾಳು ಬಜರಂಗದಳದ ಕಾರ್ಯ ಕರ್ತ ಚರಣ್‌ನ ಆರೋಗ್ಯವನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಗಳು ಹಾಜರಿದ್ದರು.
ಪೇಜಾವರ ಶ್ರೀ ಖಂಡನೆ: ತೀರ್ಥಹಳ್ಳಿಯ ಘಟನೆ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.
ತೀರ್ಥಹಳ್ಳಿಯ ಘಟನೆ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆ ನಿಜಕ್ಕೂ ಖಂಡನೀಯ. ಗೋರಕ್ಷಣೆಯ ಕಾರ್ಯಕ್ಕೆ ಈ ರೀತಿ ಸವಾಲೆಸೆಯುವವರ ವಿರುದ್ಧ ಸರಕಾರ ಗಂಭೀರ ಕ್ರಮಕೈಗೊಳ್ಳಬೇಕು. ಗೋಹತ್ಯಾ ನಿಷೇಧ ಕಾನೂನು ಕೇವಲ ಜಾರಿಗೆ ತಂದು ಪ್ರಯೋಜನವಿಲ್ಲ. ಅದರ ಪರಿಣಾಮಕಾರಿ ಅನುಷ್ಠಾನ ಆಗಬೇಕು. ಸರ್ಕಾರಗಳು ಈ ಬಗ್ಗೆ ಪೂರ್ಣ ಇಚ್ಛಾಶಕ್ತಿ ತೋರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಾನು ಸಿಎಂ ಆಗಲ್ಲ: ಈಶ್ವರಪ್ಪ

ಸಂಘಟನೆ ನನ್ನನ್ನು ಡಿಸಿಎಂ ಮಾಡಿದೆ. ನಾನು ಸಿಎಂ ಆಗಲ್ಲ. ಸಂಘಟನೆ ನನ್ನನ್ನು ಏನು ಮಾಡುತ್ತೋ ಅದು ಆಗುತ್ತೇನೆ. ಬಾಗಲಕೋಟೆಯಲ್ಲಿ ನಿರಾಣಿ ಬಗ್ಗೆ ಮಾತನಾಡಿದ್ದು ನಿಜ. ನಿರಾಣಿ ಸಣ್ಣ ಉದ್ದಿಮೆ ಆರಂಭಿಸಿ ದೊಡ್ಡ ಉದ್ಯಮಿಯಾದವರು. ಮುಂದೆ ಅವಕಾಶ ಸಿಕ್ಕರೆ ಸಿಎಂ ಆಗಬಹುದು ಎಂದಿದ್ದೆ ಬಸವರಾಜ ಬೊಮ್ಮಾಯಿ ಬದಲಾವಣೆಯಾಗುತ್ತದೆ ಎಂದು ನಾನು ಹೇಳಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News