ಸಂಸತ್ ಪ್ರವೇಶಿಸಲು ಮಾದ್ಯಮಕ್ಕೆ ನಿರ್ಬಂಧ: ಗುರುವಾರ ದಿಲ್ಲಿಯಲ್ಲಿ ಪ್ರತಿಭಟನಾ ರ‍್ಯಾಲಿ

Update: 2021-12-01 18:42 GMT
Photo : PTI

ಹೊಸದಿಲ್ಲಿ, ಡಿ. 1: ಚಳಿಗಾಲದ ಅಧಿವೇಶನದ ಸಂದರ್ಭ ಸಂಸತ್ ಪ್ರವೇಶಿಸಲು ವಿಧಿಸಿದ ನಿರ್ಬಂಧದ ವಿರುದ್ಧ ಪತ್ರಕರ್ತರ ಗುಂಪೊಂದು ಗುರುವಾರ ದಿಲ್ಲಿಯ ಪ್ರೆಸ್ ಕ್ಲಬ್‌ನಿಂದ ಸಂಸತ್ ಕಟ್ಟಡದ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಲಿದೆ. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹರಡಲು ಆರಂಭವಾದ ಬಳಿಕ ಸಂಸತ್ತಿಗೆ ಪ್ರವೇಶಿಸಲು ಮಾಧ್ಯಮ ವ್ಯಕ್ತಿಗಳಿಗೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಿದೆ. ಲೋಕಸಭಾ, ರಾಜ್ಯಸಭಾ ಹಾಗೂ ಸೆಂಟ್ರಲ್ ಹಾಲ್‌ನ ಮಾಧ್ಯಮ ಗ್ಯಾಲರಿಯಲ್ಲಿ ಪತ್ರಕರ್ತರಿಗೆ ಅವಕಾಶ ಇಲ್ಲ. ವಾರದಲ್ಲಿ ಎರಡು ದಿನ ಸಂಸತ್ತಿನ ಆವರಣ ಪ್ರವೇಶಿಸಲು ಪತ್ರಕರ್ತರಿಗೆ ಅನುಮತಿ ನೀಡಲಾಗಿದೆ. ಆದರೆ, ಕಲಾಪ ವೀಕ್ಷಿಸಲು ಅವಕಾಶ ಇಲ್ಲ.

ಸಂಸತ್ತಿನಲ್ಲಿ ಮಾಧ್ಯಮಕ್ಕೆ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಪತ್ರಕರ್ತರ ಗುಂಪೊಂದು ನವೆಂಬರ್ 27ರಂದು ಸಂಸತ್ತಿನ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಬಹಿರಂಗ ಪತ್ರ ಬರೆದಿತ್ತು. ಈಗ ಇಂತಹ ನಿರ್ಬಂಧದ ಅಗತ್ಯತೆ ಇಲ್ಲ. ಮಾಲ್, ರೆಸ್ಟೋರೆಂಟ್ ಹಾಗೂ ಸಿನೆಮಾ ಮಂದಿರ ಸೇರಿದಂತೆ ಸಾರ್ವಜನಿಕ ಸ್ಥಳಗಳು ಈಗ ಮರು ಆರಂಭವಾಗಿವೆ ಎಂದು ಪತ್ರದಲ್ಲಿ ಹೇಳಲಾಗಿದೆ. ಮಾಧ್ಯಮ ಪ್ರವೇಶಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಜುಲೈಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿತ್ತು. ಮಾಧ್ಯಮಗಳ ಕಣ್ಣಿನಿಂದ ಸಂಸದರನ್ನು, ಸಂಸತ್ ಅನ್ನು ಪ್ರತ್ಯೇಕಿಸುವ ಹತಾಶಕಾರಿ ಪ್ರವೃತ್ತಿ ಬೆಳೆಯುತ್ತಿರುವ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಈ ಪ್ರವೃತ್ತಿ ಸಂಸದೀಯ ಪ್ರಜಾಪ್ರಭುತ್ವದ ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಸಂಸತ್ತಿನಿಂದ ಮಾಧ್ಯಮವನ್ನು ದೂರ ಇಡುವ ಹುನ್ನಾರ ಇದು ಎಂದು ಪತ್ರಕ್ಕೆ ಸಹಿ ಹಾಕಿದವರಲ್ಲಿ ಒಬ್ಬರಾದ ಹಾಗೂ ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಉಮಾಕಾಂತ್ ಲಖೇರಾ ಅವರು ತಿಳಿಸಿದ್ದಾರೆ. ‘‘ಕೋವಿಡ್ ಪಿಡುಗಿನ ಸಂದರ್ಭ ಕೆಲವು ಸಮಯದ ನಿರ್ಬಂಧ ನಮಗೆ ಅರ್ಥ ಆಗುತ್ತದೆ’’ ಎಂದು ಅವರು ಹೇಳಿದರು. ‘‘ಆದರೆ, ಮಾರುಕಟ್ಟೆ ಪ್ರದೇಶ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಜನರು ಗುಂಪಾಗಿ ಸಾಗುತ್ತಿರುವುದನ್ನು ಈಗ ನೀವು ನೋಡಬಹುದು. ಆದರೆ, ಸಂಸತ್ತಿಗೆ ಮಾಧ್ಯಮ ಪ್ರವೇಶಕ್ಕೆ ಮಾತ್ರ ನಿರ್ಬಂಧ ವಿಧಿಸಲಾಗಿದೆ’’ ಎಂದು ಅವರು ಹೇಳಿದರು. ಇದರಿಂದ ಪತ್ರಕರ್ತರಿಗೆ ಸಂಸತ್ತಿನ ಕಲಾಪಗಳನ್ನು ನೋಡಲು ಹಾಗೂ ಸದಸ್ಯರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News