ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಲಿಂಗ ಬೇಧಭಾವ ಪ್ರಮಾಣ ಅಧಿಕ: ತನಿಖಾ ವರದಿ

Update: 2021-12-01 18:25 GMT
ಸ್ಕಾಟ್ ಮಾರಿಸನ್

ಸಿಡ್ನಿ, ಡಿ.1: ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಲಿಂಗ ಭೇದಭಾವ ಮತ್ತು ಶೋಷಣೆ ವ್ಯಾಪಕವಾಗಿದೆ ಎಂದು ಸರಕಾರ ಬೆಂಬಲಿತ ಉನ್ನತ ತನಿಖಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

7 ತಿಂಗಳ ತನಿಖೆಯ ಬಳಿಕ ಈ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದು, ಸಂಸತ್ತಿನಲ್ಲಿ ಈಗ ಕಾರ್ಯನಿರ್ವಹಿಸುವ ಪ್ರತೀ 3 ವ್ಯಕ್ತಿಗಳಲ್ಲಿ ಒಬ್ಬರು ಕಾರ್ಯನಿರ್ವಹಣೆಯ ಸಂದರ್ಭ ಒಂದಿಲ್ಲೊಂದು ರೀತಿಯ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.

ಸುಮಾರು 1,700 ಮುಖಂಡರ ಸಂದರ್ಶನವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.

ಲಿಂಗ ವೈವಿಧ್ಯತೆಯನ್ನು ಹೆಚ್ಚಿಸುವುದು, ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಪೂರ್ವಭಾವಿ ಕ್ರಮ ಕೈಗೊಳ್ಳುವುದು, ರಾಜಕೀಯ ಮುಖಂಡರಿಂದ ಅಧಿಕೃತ ತಪ್ಪೊಪ್ಪಿಗೆ ಹೇಳಿಕೆ ಸೇರಿದಂತೆ 28 ಶಿಫಾರಸುಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2019ರಲ್ಲಿ ಸಂಸದೀಯ ಸಿಬಂದಿ ಬ್ರಿಟಾನಿ ಹಿಗ್ಗಿನ್ಸ್ ಅವರ ಮೇಲೆ ಸಚಿವರ ಕೊಠಡಿಯೊಳಗೆ ಅತ್ಯಾಚಾರ ನಡೆದ ಆರೋಪ ದಾಖಲಾದ ಬಳಿಕ ವ್ಯಕ್ತವಾದ ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ ಈ ತನಿಖೆಗೆ ಚಾಲನೆ ನೀಡಲಾಗಿದೆ. ಮಂಗಳವಾರ ಪ್ರಕಟವಾದ ವರದಿಯನ್ನು ಸ್ವಾಗತಿಸಿರುವ ಹಿಗ್ಗಿನ್ಸ್, ತನ್ನ ಕತೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡ ಧೈರ್ಯಶಾಲಿ ಜನರು ಈ ವರದಿಗೆ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ . ವರದಿಯ ಶಿಫಾರಸುಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಟಾನಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳೂ ಬದ್ಧತೆ ಪ್ರದರ್ಶಿಸಬೇಕು ಎಂದಿದ್ದಾರೆ.

 ರಾಜಕೀಯದಲ್ಲಿರುವ ಲಿಂಗ ಭೇದಭಾವ ಸಂಸ್ಕೃತಿ ಮತ್ತು ಕಿರುಕುಳದ ಕುರಿತ ಖಂಡನೀಯ ವರದಿ ಇದಾಗಿದ್ದು ಇದರಲ್ಲಿರುವ ಅಂಶಗಳು ಆಘಾತಕಾರಿಯಾಗಿವೆ. ಆದರೆ ಇಲ್ಲಿರುವ ಹಲವು ಮಹಿಳೆಯರಿಗೆ ವರದಿಯಿಂದ ಅಚ್ಚರಿಯಾಗಿಲ್ಲ ಮತ್ತು ನಮ್ಮ ಅನುಭವದ ಕಥನ ಇದಾಗಿದೆ ಎಂದು ಗ್ರೀನ್ ಪಕ್ಷದ ಸಂಸದೆ ಸಾರಾ ಹ್ಯಾನ್ಸನ್-ಯಂಗ್ ಪ್ರತಿಕ್ರಿಯಿಸಿದ್ದಾರೆ.

ಸಂಸತ್ತಿನಲ್ಲಿ ಲಿಂಗ ಸಮಾನತೆಯನ್ನು ಸುಧಾರಿಸಲು ತಮ್ಮ ಸರಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News