ಮಾಧ್ಯಮಗಳಲ್ಲಿನ ಅಕ್ರಮಗಳನ್ನು ತಡೆಯಲು ಶಾಸನಬದ್ಧ ಅಧಿಕಾರಗಳೊಂದಿಗೆ ಮಂಡಳಿ ಸ್ಥಾಪಿಸಿ: ಸಂಸದೀಯ ಸಮಿತಿ

Update: 2021-12-02 15:58 GMT
parliament(photo:PTI)

ಹೊಸದಿಲ್ಲಿ,ಡಿ.2: ಮುದ್ರಣ,ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಅಕ್ರಮಗಳನ್ನು ತಡೆಯಲು ಶಾಸನಬದ್ಧ ಅಧಿಕಾರಗಳೊಂದಿಗೆ ಮಾಧ್ಯಮ ಮಂಡಳಿಯೊಂದನ್ನು ಸ್ಥಾಪಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿರುವ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯು,ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕೋದ್ಯಮವು ಕ್ರಮೇಣ ತನ್ನ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸಮಿತಿಯು ತನ್ನ ‘ಮಾಧ್ಯಮ ವರದಿಗಾರಿಕೆಯಲ್ಲಿ ನೈತಿಕ ಮಾನದಂಡಗಳು ’ ವರದಿಯನ್ನು ಬುಧವಾರ ಸಂಸತ್ತಿಗೆ ಸಲ್ಲಿಸಿದೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಮತ್ತು ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಆ್ಯಂಡ್ ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿ (ಎನ್‌ಬಿಡಿಎಸ್‌ಎ)ಯಂತಹ ಪ್ರಸಕ್ತ ನಿಯಂತ್ರಣ ಮಂಡಳಿಗಳಿಗೆ ತಮ್ಮ ನಿರ್ಧಾರಗಳನ್ನು ಜಾರಿಗೊಳಿಸುವ ಅಧಿಕಾರವಿಲ್ಲದ್ದರಿಂದ ಅವು ಸೀಮಿತ ಪರಿಣಾಮಕಾರಿತ್ವವನ್ನು ಹೊಂದಿವೆ ಎಂದು ವರದಿಯು ಬೆಟ್ಟುಮಾಡಿದೆ.

ನಕಲಿ ಸುದ್ದಿಗಳ ಆತಂಕಕಾರಿ ಪ್ರವೃತ್ತಿಯ ಬಗ್ಗೆಯೂ ಕಳವಳವನ್ನು ವ್ಯಕ್ತಪಡಿಸಿರುವ ಸಮಿತಿಯು,ಪಾವತಿ ಸುದ್ದಿಗಳನ್ನು ಚುನಾವಣಾ ಅಪರಾಧವನ್ನಾಗಿಸಬೇಕು ಎಂಬ ಕಾನೂನು ಆಯೋಗದ ಶಿಫಾರಸಿನ ತ್ವರಿತ ಜಾರಿಗಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕಾನೂನು ಮತ್ತು ನ್ಯಾಯ ಸಚಿವಾಲಯದ ಮನವೊಲಿಸಬೇಕು ಮತ್ತು ಅದು ಪ್ರತಿಬಂಧಕ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದೆ.

ಆಸಕ್ತ ಗುಂಪುಗಳ ಮತ್ತು ಪಾಲುದಾರರ ನಡುವೆ ವಿಸ್ತ್ರತ ಸಮಾಲೋಚನೆಗಳಿಗಾಗಿ ತಜ್ಞರನ್ನೊಳಗೊಂಡ ಮಾಧ್ಯಮ ಆಯೋಗದ ಮೂಲಕ ಸಹಮತವನ್ನು ಮೂಡಿಸಿದ ಬಳಿಕ ಮಾಧ್ಯಮ ಮಂಡಳಿಯನ್ನು ಸ್ಥಾಪಿಸಬೇಕು. ಮಾಧ್ಯಮ ಆಯೋಗವು ಮಾಧ್ಯಮಗಳಿಗೆ ಸಂಬಂಧಿಸಿದ ಎಲ್ಲ ಸಂಕೀರ್ಣ ವಿಷಯಗಳನ್ನು ಪರಿಶೀಲಿಸಬೇಕು ಮತ್ತು ತನ್ನ ಸ್ಥಾಪನೆಯ ಆರು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದಿರುವ ಸಮಿತಿಯು,‘ಒಂದು ಕಾಲದಲ್ಲಿ ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಕೈಗಳಲ್ಲಿಯ ಅತ್ಯಂತ ವಿಶ್ವಾಸಾರ್ಹ ಅಸ್ತ್ರವಾಗಿದ್ದ ಮತ್ತು ಸಾರ್ವಜನಿಕ ಹಿತಾಸಕ್ತಿಯ ಟ್ರಸ್ಟಿಗಳಾಗಿ ಕಾರ್ಯನಿರ್ವಹಿಸಿದ್ದ ಮಾಧ್ಯಮಗಳೀಗ ಕ್ರಮೇಣ ತಮ್ಮ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ಕಳೆದುಕೊಳ್ಳುತ್ತಿವೆ ಹಾಗೂ ಮೌಲ್ಯಗಳು ಮತ್ತು ನೈತಿಕತೆಗಳೊಂದಿಗೆ ರಾಜಿಯನ್ನು ಮಾಡಿಕೊಳ್ಳಲಾಗುತ್ತಿದೆ ’ ಎಂದು ಹೇಳಿದೆ.

ಪಿಸಿಐ ಮತ್ತು ಎನ್‌ಬಿಡಿಎಸ್‌ಎ ದೂರುಗಳನ್ನು ಸ್ವೀಕರಿಸಲು ಮತ್ತು ಶಿಸ್ತುಕ್ರಮಗಳನ್ನು ಜರುಗಿಸಲು ಅಧಿಕಾರ ಹೊಂದಿವೆಯಾದರೂ ತಮ್ಮ ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳುವ ಅಧಿಕಾರದಿಂದ ವಂಚಿತವಾಗಿವೆ ಎಂದು ಹೇಳಿರುವ ಸಮಿತಿಯು,ಎಲ್ಲ ವಿಧಗಳ ಮಾಧ್ಯಮಗಳನ್ನು ಒಳಗೊಂಡಿರುವಂತೆ ಪಿಸಿಐ ಪುನರ್‌ರಚನೆಗೆ ಶಿಫಾರಸು ಮಾಡಿದೆ.

ಈ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮುದ್ರಣ ಮಾಧ್ಯಮ ಮಾತ್ರವಲ್ಲ,ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳನ್ನೂ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಹೊಂದಿರುವ ಮಾಧ್ಯಮ ಮಂಡಳಿಯ ಸ್ಥಾಪನೆಯ ಸಾಧ್ಯತೆಯನ್ನು ಅನ್ವೇಷಿಸಬೇಕು ಮತ್ತು ಅಗತ್ಯವಿದ್ದಾಗ ತನ್ನ ಆದೇಶಗಳನ್ನು ಜಾರಿಗೊಳಿಸಲು ಅದನ್ನು ಶಾಸನಬದ್ಧ ಅಧಿಕಾರಗಳೊಂದಿಗೆ ಸಜ್ಜುಗೊಳಿಸಬೇಕು ಎಂದು ತನ್ನ ವರದಿಯಲ್ಲಿ ತಿಳಿಸಿರುವ ಸಮಿತಿಯು,ಮಂಡಳಿ ಸ್ಥಾಪನೆಯ ಕುರಿತು ನಿರ್ಧಾರ ಬಾಕಿಯಿರುವಂತೆ ಇ-ವೃತ್ತಪತ್ರಿಕೆಗಳ ಮೇಲ್ವಿಚಾರಣೆಗಾಗಿ ನಿಯಂತ್ರಣ ಚೌಕಟ್ಟನ್ನು ವಿಸ್ತರಿಸುವ ಬಗ್ಗೆಯೂ ಸಚಿವಾಲಯವು ಪರಿಶೀಲಿಸಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News