ಕೊರೋನ ಸೋಂಕಿನ ಔಷಧಿಯಾಗಿ ಜಿಎಸ್‌ಕೆ ಔಷಧಕ್ಕೆ ಬ್ರಿಟನ್ ಅನುಮೋದನೆ

Update: 2021-12-02 16:26 GMT
ಸಾಂದರ್ಭಿಕ ಚಿತ್ರ:PTI

ಲಂಡನ್, ಡಿ.2: ಕೊರೋನ ಸೋಂಕಿನ ವಿರುದ್ಧ ಸೊಟ್ರೊವಿಮಬ್ ಎಂದು ಕರೆಯಲ್ಪಡುವ ಏಕಕೋಶೀಯ ಪ್ರತಿಕಾಯ ಚಿಕಿತ್ಸಾ ಪದ್ಧತಿಯನ್ನು ಬಳಸಲು ಬ್ರಿಟನ್ ಹಸಿರು ನಿಶಾನೆ ತೋರಿದ್ದು ಗ್ಲಾಕ್ಸೊಸ್ಮಿತ್‌ಕ್ಲೈನ್(ಜಿಎಸ್‌ಕೆ) ಸಂಸ್ಥೆಯ ಔಷಧಕ್ಕೆ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಈ ಔಷಧವು ಒಮೈಕ್ರಾನ್ ಸೋಂಕಿನ ವಿರುಧ್ಧವೂ ಸಕ್ರಿಯತೆ ಉಳಿಸಿಕೊಳ್ಳುವ ಶಕ್ತಿ ಹೊಂದಿದ್ದು ಕೊರೋನ ಸೋಂಕು ಉಲ್ಬಣಗೊಳ್ಳುವ ಅಪಾಯ ಎದುರಿಸುತ್ತಿರುವವರಿಗೆ ಸೂಕ್ತ ಔಷಧವಾಗಿದೆ ಎಂದು ಜಿಎಸ್‌ಕೆ ಹೇಳಿದೆ. ಈ ಮಧ್ಯೆ, ದಕ್ಷಿಣ ಕೊರಿಯಾದ ದೈನಂದಿನ ಸೋಂಕು ಪ್ರಕರಣ ಮತ್ತೆ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ,ದೇಶಕ್ಕೆ ಆಗಮಿಸುವ ಪ್ರಯಾಣಿಕರು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಿದ್ದರೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡುವ ನಿರ್ಧಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪೂರ್ಣ ಪ್ರಮಾಣದ ಲಸಿಕೆ ಪಡೆದ ವ್ಯಕ್ತಿಯಲ್ಲಿ ಒಮೈಕ್ರಾನ್ ಸೋಂಕು ಪತ್ತೆಯಾದ ಬಳಿಕ ದೇಶದಲ್ಲಿ ಒಮೈಕ್ರಾನ್ ಸೋಂಕು ಉಲ್ಬಣಿಸುವ ಭೀತಿ ಎದುರಾಗಿದೆ.

ಈ ವ್ಯಕ್ತಿ ನವೆಂಬರ್ 22ರಂದು ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿ ಬಂದಿದ್ದು 7 ದಿನದ ಬಳಿಕ ಪಾಸಿಟಿವ್‌ ವರದಿ ಬಂದಿದೆ.
ದಕ್ಷಿಣ ಆಫ್ರಿಕಾದಲ್ಲಿ ಒಮೈಕ್ರಾನ್ ಸೋಂಕಿನ ದೈನಂದಿನ ಪ್ರಕರಣ ದ್ವಿಗುಣಗೊಂಡಿದೆ. ಒಮೈಕ್ರಾನ್ ಸೋಂಕಿನ ಜಾಗತಿಕ ಅಂಕಿಅಂಶ ಕೆಲವೇ ದಿನಗಳಲ್ಲಿ ಲಭಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಲವು ದೇಶಗಳು ನಿರ್ಬಂಧ ಕ್ರಮಗಳನ್ನು ಬಿಗಿಗೊಳಿಸಿರುವುದರಿಂದ ತೀವ್ರ ಆರ್ಥಿಕ ಸಮಸ್ಯೆ ಎದುರಾಗಲಿದೆ ಎಂದು ಜಪಾನ್‌ನ ಸೆಂಟ್ರಲ್ ಬ್ಯಾಂಕ್ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News