ರಾಜ್ಯ ಸರ್ಕಾರಕ್ಕೆ ಚುನಾವಣೆಗಳ ಮೇಲೆ ಭರವಸೆ ಇಲ್ಲ : ಆರ್.ವಿ.ದೇಶಪಾಂಡೆ ಆರೋಪ

Update: 2021-12-02 17:09 GMT

ಭಟ್ಕಳ: ರಾಜ್ಯ ಸರಕಾರಕ್ಕೆ ಯಾವ ಚುನಾವಣೆಯ ಮೇಲೂ ಕೂಡಾ ಭರವಸೆ ಇಲ್ಲದೇ ಇರುವುದರಿಂದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಚುನಾವಣೆಯನ್ನು ಕ್ಷೇತ್ರ ವಿಂಗಡನೆಯ ನೆಪದಲ್ಲಿ ಮುಂದೂಡಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್. ವಿ. ದೇಶಪಾಂಡೆ ಅವರು ಆರೋಪಿಸಿದರು. 

ಅವರು ಇಲ್ಲಿನ ರಂಗೀಕಟ್ಟೆಯಲ್ಲಿ ನೂತನ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ನಂತರ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 

ಕಳೆದ 7 ವರ್ಷಗಳಿಂದ ಕೇಂದ್ರ ಸರಕಾರ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರಕಾರವೂ ಕೂಡಾ ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲದೇ ಇರುವುದರಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಹಿಂದಿನ ಸಿದ್ಧರಾಮಯ್ಯ ಅವರ ಕಾಂಗ್ರೆಸ್ ಸರಕಾರ ಜಿಲ್ಲೆಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿತ್ತು. ಪ್ರವಾಸೋಧ್ಯಮಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ಬಂದಿದ್ದು ಅನೇಕ ಕಡೆಗಳಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಯಾಗಿತ್ತು. ಆದರೆ ಇಂದಿನ ಸರಕಾರ ಅಂದು ಮಂಜೂರಿಯಾದ ಮನೆಗಳಿಗೂ ಅನುದಾನ ಬಿಡುಗಡೆ ಮಾಡದೇ ಎಷ್ಟೋ ಮನೆಗಳು ಅರ್ಧಕ್ಕೆ ನಿಂತಿವೆ ಎಂದರಲ್ಲದೇ, ಮಂಕಾಳ ವೈದ್ಯ ಅವರು ಶಾಸಕರಾಗಿದ್ದಾಗ ಭಟ್ಕಳ ವಿಧಾನ ಸಭಾ ಕ್ಷೇತ್ರಕ್ಕೆ 7000 ಮನೆಗಳನ್ನು ಮಂಜೂರಿ ಮಾಡಿಸಿ ದಾಖಲೆ ಮಾಡಿದ್ದರು ಎಂದರು.

ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಅವರು ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ನಮ್ಮ ಪಕ್ಷದವರೇ ಇದ್ದಾರೆ. ಎಲ್ಲರೂ ಕೂಡಾ ತಮ್ಮ ತಮ್ಮ ಚುನಾವಣೆಯಲ್ಲಿ ಆರಿಸಿ ಬರುವಾಗ ನಮ್ಮ ಪಕ್ಷ ಅವರ ಬೆನ್ನಿಗೆ ನಿಂತು ಅವರಿಗೆ ಅಗತ್ಯದ ಸಹಾಯ, ಸಹಕಾರವನ್ನು ಮಾಡಿ ಗೆಲ್ಲಿಸಿದೆ. ನಂತರದಲ್ಲಿಯೂ ಕೂಡಾ ಅವರೊಂದಿಗೆ ಇದ್ದೇವೆ ಎನ್ನುವ ಭರವಸೆ ಅವರಿಗೆ ಇರುವುದರಿಂದ ಯಾವುದೇ ಬೇರೆ ಆಸೆ, ಆಮಿಷಕ್ಕೆ ಬೆಲೆ ಕೊಡದೇ ನಮ್ಮ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುತ್ತಾರೆನ್ನುವ ವಿಶ್ವಾಸ ಇದೆ ಎಂದರು. 

ಕಾಂಗ್ರೇಸ್ ಮುಖಂಡ ಹಾಗೂ ಅಂಜಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಖಾಜಿಯಾ ಮಾತನಾಡಿದರು.  ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್. ಎನ್. ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಚುನಾವಣಾ ವೀಕ್ಷಕ ಎಂ.ಎನ್. ಸುಬ್ರಹ್ಮಣ್ಯ,  ಶ್ರೀಪಾದ ಹೆಗಡೆ ಕಡವೆ, ನಿವೇದಿತ ಆಳ್ವಾ, ಸಾಯಿ ಗಾಂವಕರ್, ತಂಜೀಂ ಅಧ್ಯಕ್ಷ ಎಸ್. ಎಂ ಪರ್ವೇಜ್, ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ, ನಾಗರಾಜ ನಾರ್ವೆಕರ್, ಜಯಶ್ರೀ ಮೊಗೇರ, ವಿಠಲ ನಾಯ್ಕ, ವನಿತಾ ನಾಯ್ಕ, ರಾಮಾ ಮೊಗೇರ ಮುಂತಾದವರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಎಂ. ನಾಯ್ಕ ಸ್ವಾಗತಿಸಿದರು. ದೇವಿದಾಸ ಆಚಾರ್ಯ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News