ಉತ್ತರ ಪ್ರದೇಶ: ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದಾಗ ಟ್ರಕ್ ನಿಂದ ಯುದ್ಧ ವಿಮಾನದ ಟೈರ್ ಕಳ್ಳತನ!

Update: 2021-12-03 08:13 GMT
ಸಾಂದರ್ಭಿಕ ಚಿತ್ರ(PTI)

ಹೊಸದಿಲ್ಲಿ: ಲಕ್ನೊದಲ್ಲಿ ನಡೆದ ಒಂದು ವಿಲಕ್ಷಣ ಘಟನೆಯೊಂದರಲ್ಲಿ ಇಲ್ಲಿನ ಬಕ್ಷಿ ಕಾ ತಾಲಾಬ್ (ಬಿಕೆಟಿ) ಏರ್ ಫೋರ್ಸ್ ಸ್ಟೇಷನ್ ನಿಂದ ಜೋಧ್ಪುರಕ್ಕೆ ಟ್ರಕ್ ನಲ್ಲಿ ಸಾಗಿಸುತ್ತಿದ್ದ ಫೈಟರ್ ಜೆಟ್ ವಿಮಾನದ ಐದು ಟೈರ್ ಗಳಲ್ಲಿ ಒಂದನ್ನು ಕಳ್ಳತನ ಮಾಡಲಾಗಿದೆ. ವಾಹನವು ಆಶಿಯಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಶಹೀದ್ ಪಥ್ ಮೂಲಕ ಹಾದು ಹೋಗುತ್ತಿದ್ದಾಗ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ ಎಂದು hindustantimes.com ವರದಿ ಮಾಡಿದೆ.

ಐದು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿಯ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಹಾಗೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ರಾಷ್ಟ್ರದ ಭದ್ರತೆಗೆ ಸಂಬಂಧಿಸಿದಂತೆ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ ಹಾಗೂ ಇದರ ಹಿಂದೆ ಕೆಲವು ದೇಶ ವಿರೋಧಿ ಉದ್ದೇಶಗಳು ಇರಬಹುದು ಎಂದು ಪೊಲೀಸರು ಹೇಳಿದರು.

ಟ್ರಕ್ ಚಾಲಕ ಅಜ್ಮೀರ್ ನ (ರಾಜಸ್ಥಾನ)ದ ಹೇಮ್ ಸಿಂಗ್ ರಾವತ್ ನೀಡಿದ ದೂರಿನ ಮೇರೆಗೆ ಬುಧವಾರ ಎಫ್ಐಆರ್ ದಾಖಲಿಸಲಾಗಿದೆ. ರಾವತ್ ಅವರು ಫೈಟರ್ ಜೆಟ್ ನ ಐದು ಟೈರ್ ಗಳನ್ನು ಬಿಕೆಟಿ ಏರ್ ಫೋರ್ಸ್ ಸ್ಟೇಷನ್ ನಿಂದ ಜೋಧ್ಪುರಕ್ಕೆ ಸಾಗಿಸುತ್ತಿದ್ದಾಗ ಅವುಗಳಲ್ಲಿ ಒಂದನ್ನು ಶಹೀದ್ ಪಥ್ ನಲ್ಲಿ ಶನಿವಾರ (ನವೆಂಬರ್ 27) ಕಳವು ಮಾಡಲಾಗಿದೆ ಎಂದು ದೂರಿದ್ದಾರೆಂದು ಆಶಿಯಾನಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧೀರಜ್ ಶುಕ್ಲಾ ಹೇಳಿದ್ದಾರೆ.

ತನ್ನ ವಾಹನ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಾಗ ಟೈರ್ ಕಳ್ಳತನವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

ಟ್ರಕ್ ಟ್ರಾಫಿಕ್ ಜಾಮ್ ನಲ್ಲಿದ್ದಾಗ ಕಾರಿನಲ್ಲಿ ಬಂದಿದ್ದ ಇಬ್ಬರು ಟೈರ್ ಅನ್ನು ಕದ್ದಿದ್ದಾರೆ ಎಂದು ಚಾಲಕ ಹೇಳಿದರು ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಚಾಲಕ ತಕ್ಷಣ ಪೊಲೀಸ್ ತುರ್ತು ಸ್ಪಂದನಾ ಕೇಂದ್ರಕ್ಕೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿ ನಂತರ ದೂರು ದಾಖಲಿಸಿದ್ದಾರೆ. ಚಾಲಕ ಕೇವಲ ನಾಲ್ಕು ಟೈರ್ ಗಳೊಂದಿಗೆ ಜೋಧ್ಪುರ ತಲುಪಿದಾಗ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. ಚಾಲಕ ಸಂಪೂರ್ಣ ಘಟನೆಯ ಬಗ್ಗೆ ಅವರಿಗೆ ತಿಳಿಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News